ಐಟಿ ನಿಯಮಗಳು: ದೂರು ಸಮಿತಿ ಪ್ರಸ್ತಾವನೆಯ ಅಧಿಸೂಚನೆ ವಾಪಸ್ ಪಡೆದ ಕೇಂದ್ರ
ಹೊಸದಿಲ್ಲಿ: ಕಳೆದ ವರ್ಷ ಜಾರಿಗೆ ಬಂದಿರುವ ಹೊಸ ಐಟಿ ನಿಯಮಗಳಿಗೆ ತಿದ್ದುಪಡಿಗಳನ್ನು ಪ್ರಸ್ತಾಪಿಸಿದ್ದ ಅಧಿಸೂಚನೆಯನ್ನು ಕೇಂದ್ರ ಸರಕಾರ ಗುರುವಾರ ವಾಪಸ್ ಪಡೆದುಕೊಂಡಿದೆ ಎಂದು Scroll.in ವರದಿ ಮಾಡಿದೆ.
ಜೂನ್ 22 ರ ತನಕ ಸಂಬಂಧಿತರಿಗೆ ಪ್ರತಿಕ್ರಿಯೆಗಳು ಸಲ್ಲಿಸಬಹುದಾಗಿದ್ದ ಕರಡು ಅಧಿಸೂಚನೆಯನ್ನು ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗಿತ್ತು ಆದರೆ ಈಗ ಅದು ಅಲ್ಲಿ ಕಾಣಿಸುತ್ತಿಲ್ಲ.
ದೂರು ಪರಿಹಾರ ಸಮಿತಿ ರಚಿಸುವ ಪ್ರಸ್ತಾವನೆಯನ್ನು ಕರಡು ಅಧಿಸೂಚನೆಯಲ್ಲಿ ಮಾಡಲಾಗಿತ್ತಲ್ಲದೆ ಸಾಮಾಜಿಕ ಜಾಲತಾಣ ಕಂಪನಿಗಳ ಕಂಟೆಂಟ್ ನಿಯಂತ್ರಣ ನಿರ್ಧಾರಗಳನ್ನು ವಾಪಸ್ ಪಡೆಯುವ ಅಧಿಕಾರ ಈ ಸಮಿತಿಗೆ ನೀಡುವ ಉದ್ದೇವಿತ್ತು. ಸಂಬಂಧಿತರು ಸಾಮಾಜಿಕ ಜಾಲತಾಣಗಳ ನಿರ್ಧಾರದ ವಿರುದ್ಧ ಅಪೀಲು ಸಲ್ಲಿಸಲು 30 ದಿನಗಳ ಕಾಲಾವಕಾಶ ಹಾಗೂ ಅದರ ಪರಿಹಾರಕ್ಕೆ ಸಮಿತಿಗೆ 30 ದಿನಗಳ ಕಾಲಾವಕಾಶದ ಬಗ್ಗೆ ಪ್ರಸ್ತಾವಿತ ತಿದ್ದುಪಡಿಯಲ್ಲಿ ಹೇಳಲಾಗಿತುತ.
ಕರಡು ಅಧಿಸೂಚನೆಯ ಪ್ರಕಾರ ಬಳಕೆದಾರರೊಬ್ಬರಿಂದ ಬಂದ ದೂರನ್ನು 24 ಗಂಟೆಯೊಳಗೆ ದೃಢೀಕರಿಸಬೇಕು ಹಾಗೂ 15 ದಿನಗಳೊಳಗೆ ಅದನ್ನು ವಿಲೇವಾರಿ ಮಾಡಬೇಕಿದೆ. ಆದರೆ ಕಳೆದ ವರ್ಷ ಜಾರಿಗೆ ಬಂದಿರುವ ನಿಯಮಗಳು ಈ ಕುರಿತು ಏನನ್ನೂ ಹೇಳುವುದಿಲ್ಲ.