ಪತ್ರಕರ್ತ ಹತ್ಯೆ ಪ್ರಕರಣ: ನ್ಯಾಯಾಲಯಕ್ಕೆ ಹಾಜರಾದ 'ಮೃತ' ಸಾಕ್ಷಿ!

Update: 2022-06-04 03:00 GMT
ರಾಜದೇವ್ ರಂಜನ್

ಪಾಟ್ನಾ: ಪತ್ರಕರ್ತ ರಾಜದೇವ್ ರಂಜನ್ ಹತ್ಯೆ ಪ್ರಕರಣದಲ್ಲಿ ಕೇಂದ್ರೀಯ ತನಿಖಾ ಸಂಸ್ಥೆ "ಮೃತ" ಎಂದು ಘೋಷಿಸಿದ ಸಾಕ್ಷಿಯೊಬ್ಬ ಶುಕ್ರವಾರ ಮುಝಫರ್‌ಪುರ ನ್ಯಾಯಾಲಯದಲ್ಲಿ ಹಾಜರಾಗಿದ್ದರಿಂದ ಸಿಬಿಐ ತೀವ್ರ ಮುಜುಗರ ಅನುಭವಿಸುವಂತಾಯಿತು ಎಂದು ndtv.com ವರದಿ ಮಾಡಿದೆ.

ಸುಳ್ಳು ಮರಣ ಪ್ರಮಾಣಪತ್ರ ಸಲ್ಲಿಸಿದ್ದಕ್ಕಾಗಿ ನ್ಯಾಯಾಲಯ ಸಿಬಿಐಗೆ ಶೋಕಾಸ್ ನೋಟಿಸ್ ಜಾರಿಗೊಳಿಸಿತು.

ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಮತ್ತು ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಪುನೀತ್ ಕುಮಾರ್ ಗಾರ್ಗ್ ಅವರು ಸಿಬಿಐಗೆ ನೋಟಿಸ್ ನೀಡಿ, ಮುಂದಿನ ವಿಚಾರಣೆ ನಡೆಯುವ ದಿನಾಂಕವಾದ ಜೂನ್ 20ರ ಒಳಗೆ ಉತ್ತರಿಸುವಂತೆ ಸೂಚಿಸಿದ್ದಾರೆ.

'ಹಿಂದೂಸ್ತಾನ್' ಎಂಬ ಹಿಂದಿ ದೈನಿಕದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ರಾಜದೇವ್ ರಂಜನ್, 2016ರಲ್ಲಿ ಹತ್ಯೆಯಾಗಿದ್ದರು. ಪತ್ರಕರ್ತ ಮನೆಗೆ ಹೋಗುತ್ತಿದ್ದಾಗ ಐದು ಮಂದಿ ಕಿಡಿಗೇಡಿಗಳು ಈ ಹತ್ಯೆ ನಡೆಸಿದ್ದರು.

ಈ ಮುನ್ನ ಸಿಬಿಐ ಸಾಕ್ಷಿಯ ವಿಚಾರಣೆಗಾಗಿ ಬಡಮಿ ದೇವಿ ಎಂಬವರಿಗೆ ಸಮನ್ಸ್ ನೀಡುವಂತೆ ಕೋರಿದ ಮನವಿ ಮೇರೆಗೆ ಸಮನ್ಸ್ ನೀಡಲಾಗಿತ್ತು. ಆದಗ್ಯೂ ಕಳೆದ ಮೇ 24ರಂದು ತನಿಖಾ ಸಂಸ್ಥೆ ಆಕೆಯನ್ನು ಮೃತಪಟ್ಟಿದ್ದಾಗಿ ಘೋಷಿಸಿ, ನ್ಯಾಯಾಲಯಕ್ಕೆ ಮರಣ ದೃಢೀಕರಣ ಪತ್ರವನ್ನೂ ಸಲ್ಲಿಸಿತ್ತು.

"ನಾನು ಸಿವಾನ್‍ ನಲ್ಲಿರುವ ಕಸೇರಾ ತೋಲಿ ಮನೆಯಲ್ಲಿ ವಾಸವಿದ್ದೇನೆ. ನನ್ನನ್ನು ಪ್ರಕರಣಕ್ಕೆ ಸಾಕ್ಷಿಯಾಗಿ ಹೆಸರಿಸಲಾಗಿತ್ತು. ಆದರೆ ಸಿಬಿಐನ ಯಾವ ಅಧಿಕಾರಿಗಳೂ ನನ್ನನ್ನು ಭೇಟಿ ಮಾಡಿಲ್ಲ. ಆದಾಗ್ಯೂ ಸಿಬಿಐ ನನ್ನನ್ನು ಮೃತ ಎಂದು ಘೋಷಿಸಿದ್ದು, ಪತ್ರಿಕೆಗಳ ಮೂಲಕ ಇದು ತಿಳಿದು ಬಂತು. ಇದು ಪಿತೂರಿ" ಎಂದು ಅವರು ಅಫಿಡವಿಟ್‍ನಲ್ಲಿ ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News