ಉತ್ತರ ಪ್ರದೇಶ: ಬಿಜೆಪಿ ವಕ್ತಾರೆಯಿಂದ ಪ್ರವಾದಿಯ ಬಗ್ಗೆ ಅವಹೇಳನಕಾರಿ ಹೇಳಿಕೆ ಬಳಿಕ ಘರ್ಷಣೆ; 36 ಮಂದಿಯ ಬಂಧನ

Update: 2022-06-04 05:31 GMT
ಸಾಂದರ್ಭಿಕ ಚಿತ್ರ

ಕಾನ್ಪುರ: ಬಿಜೆಪಿ ವಕ್ತಾರೆ ಪ್ರವಾದಿ ಮುಹಮ್ಮದ್ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಬಳಿಕ ಉತ್ತರ ಪ್ರದೇಶದ ಕಾನ್ಪುರದಲ್ಲಿ ಶುಕ್ರವಾರ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ 36 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಇಂದು ತಿಳಿಸಿದ್ದಾರೆ.

ಹಿಂಸಾಚಾರದಲ್ಲಿ ತೊಡಗಿರುವ ಜನರನ್ನು ಗುರುತಿಸಲು ಪೊಲೀಸರು ವೀಡಿಯೊ ಕ್ಲಿಪ್ಗಳನ್ನು ಜಾಲಾಡಿದ್ದು, ಬಳಿಕ ಅವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಪ್ರಕರಣದಲ್ಲಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಮೂರು ಪ್ರಥಮ ಮಾಹಿತಿ ವರದಿಗಳು ಅಥವಾ ಎಫ್ಐಆರ್ಗಳನ್ನು ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವೀಡಿಯೊಗಳ ಆಧಾರದ ಮೇಲೆ ಹೆಚ್ಚಿನ ಜನರನ್ನು ಗುರುತಿಸಲಾಗುತ್ತಿದೆ. ದುಷ್ಕರ್ಮಿಗಳ  ವಿರುದ್ಧ ಗೂಂಡಾ ಕಾಯ್ದೆಯಡಿ ಕ್ರಮ ಕೈಗೊಂಡು ಅವರ ಆಸ್ತಿಯನ್ನು ವಶಪಡಿಸಿಕೊಳ್ಳಲಾಗುವುದು ಎಂದು ಪೊಲೀಸ್ ಆಯುಕ್ತ ವಿಜಯ್ ಸಿಂಗ್ ಮೀನಾ ತಿಳಿಸಿದ್ದಾರೆ.

ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಹಾಗೂ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಭದ್ರತೆ ಏರ್ಪಡಿಸಲಾಗಿದೆ.

ಇತ್ತೀಚೆಗೆ ಜ್ಞಾನವಾಪಿ  ಮಸೀದಿ ವಿಚಾರದಲ್ಲಿ ನಡೆದ ಚರ್ಚೆಯ ವೇಳೆ ಪ್ರವಾದಿ ಮುಹಮ್ಮದ್ ವಿರುದ್ಧ ಭಾರತೀಯ ಜನತಾ ಪಕ್ಷದ (ಬಿಜೆಪಿ) ವಕ್ತಾರೆ ನೂಪುರ್ ಶರ್ಮಾ ನೀಡಿದ  ಹೇಳಿಕೆಯನ್ನು  ಪ್ರತಿಭಟಿಸಿ ಮಾರುಕಟ್ಟೆ ಮುಚ್ಚುವಂತೆ ಕರೆ ನೀಡಲಾಗಿತ್ತು. ಮಾರುಕಟ್ಟೆ ಬಂದ್ ಗೆ ಸಂಬಂಧಿಸಿ ಶುಕ್ರವಾರ ಕಾನ್ಪುರದ ಕೆಲವು ಭಾಗಗಳಲ್ಲಿ ಎರಡು ಗುಂಪುಗಳ ಹೊಡೆದಾಟ ನಡೆದು, ಕಲ್ಲು ತೂರಾಟವಾದ ಬಳಿಕ ಹಿಂಸಾಚಾರ ಭುಗಿಲೆದ್ದಿತ್ತು. 

ಘರ್ಷಣೆಯಲ್ಲಿ ಹದಿಮೂರು ಪೊಲೀಸ್ ಸಿಬ್ಬಂದಿ ಹಾಗೂ  ಎರಡೂ ಕಡೆಯಿಂದ ಮೂವತ್ತು ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News