ಉದ್ಯೋಗಿಗಳ ಒತ್ತಡಕ್ಕೆ ಮಣಿದು ದಲಿತ ಹೋರಾಟಗಾರ್ತಿಯ ಉಪನ್ಯಾಸ ಕಾರ್ಯಕ್ರಮ ರದ್ದುಗೊಳಿಸಿದ ಗೂಗಲ್

Update: 2022-06-04 06:16 GMT
ಥೆನ್ಮೋಳಿ ಸೌಂದರರಾಜನ್ (Photo courtesy: PAX AHIMSA GETHEN/CC BY-SA 4.0)

ಹೊಸದಿಲ್ಲಿ: ಅಮೆರಿಕಾ ಮೂಲದ ದಲಿತ ಹೋರಾಟಗಾರ್ತಿ ಥೆನ್ಮೋಳಿ ಸೌಂದರರಾಜನ್ ಅವರು ಗೂಗಲ್ ಕಂಪೆನಿಯಲ್ಲಿ ನೀಡಲಿದ್ದ ಭಾಷಣ ಕಾರ್ಯಕ್ರಮವನ್ನು ಕೆಲವು ಉದ್ಯೋಗಿಗಳ ಒತ್ತಡದ ಹಿನ್ನೆಲೆಯಲ್ಲಿ ಕಂಪೆನಿ ರದ್ದುಗೊಳಿಸಿದೆ ಎಂದು Washington Post ವರದಿ ಮಾಡಿದೆ.

ಗೂಗಲ್ ಸಂಸ್ಥೆಯ "ಡೈವರ್ಸಿಟಿ ಇಕ್ವಿಟಿ ಇನ್‍ಕ್ಲೂಸಿವಿಟಿ'' (ವೈವಿಧ್ಯತೆ, ಸಮಾನತೆ, ಸೇರ್ಪಡೆ) ಯೋಜನೆಯಡಿ ಈ ಉಪನ್ಯಾಸ ಕಾರ್ಯಕ್ರಮವನ್ನು ಗೂಗಲ್ ಸಂಸ್ಥೆಯ ಹಿರಿಯ ಪ್ರಬಂಧಕಿ ತನುಜಾ ಗುಪ್ತಾ ಏರ್ಪಾಟು ಮಾಡಿದ್ದರು. ಆದರೆ ಈ ಉಪನ್ಯಾಸ ನಡೆಯಲಿದೆ ಎಂದು ತಿಳಿಯುತ್ತಲೇ ಹಲವಾರು ಉದ್ಯೋಗಿಗಳು ಕಂಪೆನಿಯ ಇಂಟ್ರಾನೆಟ್ ಮೂಲಕ ಅದನ್ನು ರದ್ದುಗೊಳಿಸುವಂತೆ ಕೋರಿದ್ದರಲ್ಲದೆ ಸೌಂದರರಾಜನ್ ಅವರು ಹಿಂದು ವಿರೋಧಿ ಎಂದು ಆರೋಪಿಸಿದ್ದರು.

ಗೂಗಲ್ ಸಂಸ್ಥೆಯ ಹಿಂದುತ್ವ ಪರ ಉದ್ಯೋಗಿಗಳ ಒತ್ತಡದಿಂದ ಈ ಕಾರ್ಯಕ್ರಮ ರದ್ದುಗೊಂಡಿದೆ ಎಂದೇ ತಿಳಿಯಲಾಗಿದ್ದು ಈ ಬೆಳವಣಿಗೆಯ ನಂತರ ಸೌಂದರರಾಜನ್ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದ ತನುಜಾ ಗುಪ್ತಾ ಅವರು ಒತ್ತಡಕ್ಕೆ ಮಣಿದು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎಂದು ವರದಿಯಾಗಿದೆ.

ಗೂಗಲ್ ಸಂಸ್ಥೆಯಲ್ಲಿ ಜಾತಿ ಸಮಾನತೆ ಕುರಿತು ಉಪನ್ಯಾಸ ಆಯೋಜಿಸಿದರೆ ಅದರಿಂದ ತಮ್ಮ ಜೀವಗಳಿಗೆ ಅಪಾಯವಿದೆ ಎಂದು ಕೆಲ ಉದ್ಯೋಗಿಗಳು ಹೇಳಿದ್ದಾರೆನ್ನಲಾಗಿದೆ.

ಸೌಂದರರಾಜನ್ ಅವರು ಅಂಬೇಡ್ಕರೈಟ್ಸ್ ಅಸೋಸಿಯೇಶನ್  ಆಫ್ ನಾರ್ತ್ ಅಮೆರಿಕಾ ಇದರ ಮಾಜಿ ಅಧ್ಯಕ್ಷೆಯಾಗಿದ್ದು ಜಾತಿ ಸಮಾನತೆಗಾಗಿ ಹೋರಾಡುವ ಇಕ್ವಾಲಿಟಿ ಲ್ಯಾಬ್ಸ್ ಸಂಸ್ಥೆಯ ಸ್ಥಾಪಕಿಯಾಗಿದ್ದಾರೆ.

ತಮ್ಮ ಉಪನ್ಯಾಸ ಕಾರ್ಯಕ್ರಮ ರದ್ದುಗೊಂಡ ಹಿನ್ನೆಲೆಯಲ್ಲಿ ಸೌಂದರರಾಜನ್ ಅವರು ಗೂಗಲ್ ಸಿಇಒ ಸುಂದರ್ ಪಿಚೈ ಅವರಿಗೆ ಪತ್ರ ಬರೆದು ತಮ್ಮ ಅಸಮಾಧಾನವನ್ನು ತೋಡಿಕೊಂಡಿದ್ದಾರೆ.

"ಕಂಪೆನಿಯು ಈ ಕಾರ್ಯಕ್ರಮ ರದ್ದುಗೊಳಿಸಿರುವುದು ನನಗೆ ಹಾಗೂ ಹಲವು ಉದ್ಯೋಗಿಗಳಿಗೆ ನೋವು ತಂದಿದೆ. ತನ್ನ ಉದ್ಯೋಗಿಗಳಲ್ಲಿ ಇರುವ ಜಾತೀಯತೆಯುನ್ನು ದೂರ ಮಾಡಲು ಗೂಗಲ್ ಶ್ರಮಿಸಬೇಕು,"ಎಂದು ಅವರು ಬರೆದಿದ್ದಾರೆ.

ಎಪ್ರಿಲ್ 18ರಂದು ದಲಿತ ಇತಿಹಾಸ ಮಾಸದ ಅಂಗವಾಗಿ ಈ ಉಪನ್ಯಾಸ ನಡೆಯಲಿತ್ತು.

ಕಂಪೆನಿಯಿಂದ ಹೊರಬಂದ ನಂತರ ತನುಜಾ ಗುಪ್ತಾ ಅವರು ವೈಯಕ್ತಿಕ ನೆಲೆಯಲ್ಲಿ ಸೌಂದರರಾಜನ್ ಅವರೊಂದಿಗೆ ಜಾತಿ ತಾರತಮ್ಯ ಮತ್ತು ಇಕ್ವಾಲಿಟಿ ಲ್ಯಾಬ್ಸ್ ಕೆಲಸದ ಕುರಿತು ಚರ್ಚೆ ಕಾರ್ಯಕ್ರಮ ಆಯೋಜಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News