ಪೊಲೀಸ್ ಅನುಮತಿಯಿಲ್ಲದೆ ರ‍್ಯಾಲಿ ನಡೆಸಿದ ಪ್ರಕರಣ: ಜಿಗ್ನೇಶ್ ಮೇವಾನಿಗೆ ಜಾಮೀನು

Update: 2022-06-04 06:37 GMT
Photo: Jignesh Mevani/ Facebook

ಹೊಸದಿಲ್ಲಿ: 2017 ರಲ್ಲಿ ಪೊಲೀಸ್ ಅನುಮತಿಯಿಲ್ಲದೆ ರ್ಯಾಲಿ ನಡೆಸಿದ ಪ್ರಕರಣದಲ್ಲಿ ಪಕ್ಷೇತರ ಶಾಸಕ ಜಿಗ್ನೇಶ್ ಮೇವಾನಿ ಹಾಗೂ  ಇತರ ಒಂಬತ್ತು ಮಂದಿಗೆ ಗುಜರಾತ್‌ನ ಮೆಹ್ಸಾನಾದ ಸೆಷನ್ಸ್ ನ್ಯಾಯಾಲಯ ಶುಕ್ರವಾರ ಜಾಮೀನು ನೀಡಿದೆ ಎಂದು ಪಿಟಿಐ ವರದಿ ಮಾಡಿದೆ.

ಆದರೆ, ತನ್ನ ಅನುಮತಿಯಿಲ್ಲದೆ ಗುಜರಾತ್ ತೊರೆಯದಂತೆ ನ್ಯಾಯಾಲಯ ಅವರಿಗೆ ಸೂಚಿಸಿದೆ. ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಸಿ.ಎಂ.ಪವಾರ್ ಅವರು ಮೇವಾನಿ ಮತ್ತು ಇತರ ಒಂಬತ್ತು ಮಂದಿಗೆ ತಮ್ಮ ಪಾಸ್‌ಪೋರ್ಟ್‌ಗಳನ್ನು ನ್ಯಾಯಾಲಯಕ್ಕೆ ಹಸ್ತಾಂತರಿಸುವಂತೆ ಸೂಚಿಸಿದರು.

ಮೇ 5 ರಂದು  ಮೆಹ್ಸಾನಾದ ಮ್ಯಾಜಿಸ್ಟ್ರೇಟ್,  ಮೇವಾನಿ ಹಾಗೂ ಇತರ 9 ಮಂದಿ  ದೋಷಿಗಳೆಂದು ಘೋಷಿಸಿ ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಿದರು. ಆದಾಗ್ಯೂ, ಮೇಲ್ಮನವಿ ಸಲ್ಲಿಸಲು ನ್ಯಾಯಾಧೀಶರು ಅವರಿಗೆ ಜಾಮೀನು ನೀಡಿದ್ದರು.

ಸೆಷನ್ಸ್ ನ್ಯಾಯಾಧೀಶರು ಶುಕ್ರವಾರ ಮೇವಾನಿ ಮತ್ತು ಇತರ ಒಂಬತ್ತು ಆರೋಪಿಗಳ ಮನವಿಯನ್ನು ಒಪ್ಪಿಕೊಂಡರು. ಪ್ರಕರಣದ ವಿಚಾರಣೆಯ ಸಮಯದಲ್ಲಿ ಅವರಿಗೆ ನಿಯಮಿತ ಜಾಮೀನು ನೀಡಿದರು.

"ನ್ಯಾಯಾಲಯದ ತೀರ್ಪನ್ನು ನಾನು ಗೌರವಿಸುತ್ತೇನೆ. ಆದರೆ ಸರಕಾರವು ನನಗೆ ಕಿರುಕುಳ ನೀಡಲು ಯಾವುದೇ ಅವಕಾಶವನ್ನೂ  ಬಿಡುತ್ತಿಲ್ಲ'' ಎಂದು ಎಂದು ಶಾಸಕ ಮೇವಾನಿ ಆರೋಪಿಸಿದ್ದಾರೆ ಎಂದು 'ಇಂಡಿಯಾ ಟುಡೇ' ವರದಿ ಮಾಡಿದೆ.

2016ರಲ್ಲಿ ಸತ್ತ ಹಸುವಿನ ಚರ್ಮ ಸುಲಿದ ಆರೋಪದ ಮೇಲೆ ಮೇಲ್ಜಾತಿ ಗುಂಪು ನಾಲ್ವರು ದಲಿತರನ್ನು ವಿವಸ್ತ್ರಗೊಳಿಸಿ ಥಳಿಸಿತು.ಈ ಪ್ರಕರಣದಲ್ಲಿ ಯಾವುದೇ ಕ್ರಮ ಕೈಗೊಳ್ಳದಿರುವುದನ್ನು ಪ್ರತಿಭಟಿಸಿ ಶಾಸಕ  ಹಾಗೂ ಅವರ ಬೆಂಬಲಿಗರು 2017ರಲ್ಲಿ  "ಆಝಾದಿ ಕೂಚ್" ಎಂಬ ಪ್ರತಿಭಟನಾ ಮೆರವಣಿಗೆಯನ್ನು ಬನಸ್ಕಾಂತ ಜಿಲ್ಲೆಯ ಮೆಹ್ಸಾನಾದಿಂದ ಧನೇರಾ ಪಟ್ಟಣದವರೆಗೆ ಆಯೋಜಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News