ಖ್ಯಾತ ಭೌತವಿಜ್ಞಾನ ಸತ್ಯೇಂದ್ರ ನಾಥ್ ಬೋಸ್ ಅವರಿಗೆ ಡೂಡಲ್ ಮೂಲಕ ಗೌರವ ಸಮರ್ಪಿಸಿದ ಗೂಗಲ್

Update: 2022-06-04 07:15 GMT

ಹೊಸದಿಲ್ಲಿ: ಭಾರತದ ಖ್ಯಾತ ಗಣಿತಶಾಸ್ತ್ರಜ್ಞ ಮತ್ತು ಭೌತವಿಜ್ಞಾನಿ ಸತ್ಯೇಂದ್ರ ನಾಥ್ ಬೋಸ್ ಅವರಿಗೆ ವಿಶೇಷ ಡೂಡಲ್ ಮೂಲಕ ಇಂದು ಗೂಗಲ್ ಗೌರವ ಸಲ್ಲಿಸಿ ಗಣಿತ ಮತ್ತು ಭೌತವಿಜ್ಞಾನ ಕ್ಷೇತ್ರಕ್ಕೆ ಅವರ ಕೊಡುಗೆಯನ್ನು ಸ್ಮರಿಸಿದೆ.

1920ರ ದಶಕದಲ್ಲಿ ಕ್ವಾಂಟಮ್ ಫಿಸಿಕ್ಸ್ ಕ್ಷೇತ್ರದಲ್ಲಿನ ಸಾಧನೆಗೆ ಹೆಸರು ಪಡೆದ ಬೋಸ್ ಅವರು 1924ರಲ್ಲಿ ಈ ದಿನದಂದು ತಮ್ಮ ಕ್ವಾಂಟಮ್ ಫಾರ್ಮುಲೇಶನ್‍ಗಳನ್ನು ಜರ್ಮನ್ ವಿಜ್ಞಾನಿ ಆಲ್ಬರ್ಟ್ ಐನ್‍ಸ್ಟೀನ್ ಅವರಿಗೆ ಕಳುಹಿಸಿದ್ದರು. ಕ್ವಾಂಟಮ್ ಮೆಕಾನಿಕ್ಸ್ ಕ್ಷೇತ್ರದಲ್ಲಿ ಇದೊಂದು ಮಹತ್ವದ ಅನ್ವೇಷಣೆ ಎಂದು ಐನ್‍ಸ್ಟೀನ್ ನಂತರ ಹೇಳಿದ್ದರು.

ಐನ್‍ಸ್ಟೀನ್ ಅವರನ್ನು ತಮ್ಮ ಗುರುವೆಂದು ಸತ್ಯೇಂದ್ರ ನಾಥ್ ಬೋಸ್ ಪರಿಗಣಿಸಿದ್ದರು. 1984ರಲ್ಲಿ ಕೊಲ್ಕತ್ತಾದಲ್ಲಿ ಜನಿಸಿದ ಬೋಸ್ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಅಲ್ಲಿನ ಹಿಂದು ಸ್ಕೂಲ್‍ನಲ್ಲಿ ಪಡೆದಿದ್ದರು. ನಂತರ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಶಿಕ್ಷಣ ಮುಂದುವರಿಸಿದ್ದರು.

ಖ್ಯಾತ ವಿಜ್ಞಾನಿ ಜಗದೀಶ್ ಚಂದ್ರ ಬೋಸ್ ಮತ್ತು ಇತಿಹಾಸತಜ್ಞ ಪ್ರಫುಲ್ಲ ಚಂದ್ರ ರೇ ಬೋಸ್ ಅವರಿಂದ ಸ್ಫೂರ್ತಿ ಪಡೆದಿದ್ದ ಸತ್ಯೇಂದ್ರ ನಾಥ್ ಬೋಸ್ ಅವರು ಕೊಲ್ಕತಾ ವಿವಿಯ ಭೌತಶಾಸ್ತ್ರ ವಿಭಾಗದಲ್ಲಿ 1916 ರಿಂದ 1920 ತನಕ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದರು.

1954ರಲ್ಲಿ ಭಾರತ ಸರಕಾರ ಅವರಿಗೆ ಪದ್ಮ ವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News