ಯುಪಿಎಸ್ಸಿ ಪಾಸ್ ಆಗಿದ್ದಾಳೆಂದು ಸನ್ಮಾನಿಸಿದ ಜಿಲ್ಲಾಡಳಿತ, ಸಂಸ್ಥೆ: 'ಪ್ರಮಾದವಾಗಿದೆ ಕ್ಷಮಿಸಿ' ಎಂದ ಯುವತಿ ಕುಟುಂಬ!
ರಾಮಘರ್: ಜಾರ್ಖಂಡ್‍ನ ರಾಮಘರ್ ಜಿಲ್ಲೆಯ 24 ವರ್ಷದ ದಿವ್ಯಾ ಪಾಂಡೆ ಈ ಬಾರಿಯ ಯುಪಿಎಸ್ಸಿ ಪರೀಕ್ಷೆಯಲ್ಲಿ ತನ್ನ ಮೊದಲನೇ ಪ್ರಯತ್ನದಲ್ಲಿಯೇ ತೇರ್ಗಡೆಗೊಂಡಿದ್ದಾಳೆಂದು ಹೇಳಿಕೊಂಡಿದ್ದ ಆಕೆಯ ಕುಟುಂಬ ಇದೀಗ ತಪ್ಪು ಮಾಹಿತಿ ನೀಡಿದ್ದಕ್ಕಾಗಿ ದಿವ್ಯಾಳ ಯಶಸ್ಸಿಗೆ ಆಕೆಯನ್ನು ಸನ್ಮಾನಿಸಿದ್ದ ಜಿಲ್ಲಾಡಳಿತ ಮತ್ತು ಸೆಂಟ್ರಲ್ ಕೋಲ್‍ಫೀಲ್ಡ್ಸ್ ಲಿಮಿಟೆಡ್‍ನಿಂದ ಕ್ಷಮೆಯಾಚಿಸಿದೆಯಲ್ಲದೆ ಇದೊಂದು ಪ್ರಮಾದ ಎಂದು ಬಣ್ಣಿಸಿದೆ.
ವಾಸ್ತವವಾಗಿ ಸಿವಿಲ್ ಸರ್ವಿಸಸ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ 323ನೇ ರ್ಯಾಂಕ್ ಪಡೆದಿದ್ದು ದಕ್ಷಿಣ ಭಾರತದ ದಿವ್ಯಾ ಪಿ ಎಂಬವರೇ ಹೊರತು ಜಾರ್ಖಂಡ್‍ನ ದಿವ್ಯಾ ಪಾಂಡೆ ಅಲ್ಲ ಎಂದು ಆಕೆಯ ಸೋದರಿ ಪ್ರಿಯದರ್ಶಿನಿ ಹೇಳಿದ್ದಾರೆ.
ಯಾವುದೇ ಕೋಚಿಂಗ್ ಪಡೆಯದೆ ಅಂತರ್ಜಾಲ ಮತ್ತು ಸ್ಮಾರ್ಟ್ ಫೋನ್ ಬಳಸಿ ಕಲಿತು ದಿವ್ಯಾ ಪಾಂಡೆ ಯುಪಿಎಸ್‍ಸಿ ಪರೀಕ್ಷೆಯಲ್ಲಿ ತೇರ್ಗಡೆಗೊಂಡಿದ್ದಾಳೆಂದು ಆಕೆಯ ಕುಟುಂಬ ಹೇಳಿದ್ದರಿಂದ ಸೆಂಟ್ರಲ್ ಕೋಲ್‍ಫೀಲ್ಡ್ಸ್ ಲಿಮಿಟೆಡ್ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಪಿ ಎಂ ಪ್ರಸಾದ್ ಮತ್ತಿತರ ಅಧಿಕಾರಿಗಳು ಆಕೆಯನ್ನು ಸನ್ಮಾನಿಸಿದ್ದರು. ಆಕೆಯ ತಂದೆ ಸೆಂಟ್ರಲ್ ಕೋಲ್‍ಫೀಲ್ಡ್ಸ್‍ನ ನಿವೃತ್ತ ಕ್ರೇನ್ ಆಪರೇಟರ್ ಆಗಿದ್ದೇ ಇದಕ್ಕೆ ಕಾರಣ.
ಈ ಸುದ್ದಿ ಮಾಧ್ಯಮದಲ್ಲಿ ದೊಡ್ಡ ಸುದ್ದಿಯಾಗಿತ್ತು, ಜಿಲ್ಲಾಧಿಕಾರಿ ಮಾಧವಿ ಮಿಶ್ರಾ ಕೂಡ ದಿವ್ಯಾಳನ್ನು ಸನ್ಮಾನಿಸಿದ್ದರು.
ತಮಗೆ ಸುಳ್ಳು ಸುದ್ದಿ ಹರಡುವ ಉದ್ದೇಶವಿರಲಿಲ್ಲ, ಕ್ಷಮೆ ಕೋರುತ್ತೇವೆ ಎಂದು ಕುಟುಂಬ ಹೇಳಿದೆ.
ದಿವ್ಯಾಳ ಉತ್ತರ ಪ್ರದೇಶ ಮೂಲದ ಸ್ನೇಹಿತೆ ನೀಡಿದ ಮಾಹಿತಿಯನ್ನು ಅಂತರ್ಜಾಲ ಸಮಸ್ಯೆಯಿಂದ ಕುಟುಂಬಕ್ಕೆ ದೃಢೀಕರಿಸಲು ಸಾಧ್ಯವಾಗಿರಲಿಲ್ಲ ಆದರೆ ನಿವೃತ್ತ ಕ್ರೇನ್ ಆಪರೇಟರ್ ಮಗಳು ಐಎಎಸ್ ಪರೀಕ್ಷೆ ಪಾಸ್ ಮಾಡಿದ್ದಾಳೆಂಬ ಸುದ್ದಿ ವೈರಲ್ ಆಗಿತ್ತು. ಎಂದು ಕೋಲ್‍ಫೀಲ್ಡ್ಸ್ ಮಜ್ದೂರ್ ಯೂನಿಯನ್ ಕಾರ್ಯದರ್ಶಿ ಚಂದ್ರೇಶ್ವರ್ ಸಿಂಗ್ ಹೇಳಿದ್ದಾರೆ.