ಭಾರತದಲ್ಲಿ ಪ್ರತಿ 36 ಶಿಶುಗಳಲ್ಲಿ ಒಂದು ತನ್ನ ಮೊದಲ ಹುಟ್ಟುಹಬ್ಬಕ್ಕೆ ಮುನ್ನವೇ ಸಾಯುತ್ತಿದೆ: ವರದಿ

Update: 2022-06-04 16:07 GMT

ಹೊಸದಿಲ್ಲಿ,ಜೂ.4: ಕಳೆದ ಕೆಲವು ದಶಕಗಳಲ್ಲಿ ಶಿಶು ಮರಣ ದರ (ಐಎಂಆರ್)ದಲ್ಲಿ ಇಳಿಕೆಯಾಗಿದ್ದರೂ ಭಾರತದಲ್ಲಿ ಪ್ರತಿ 36 ಶಿಶುಗಳ ಪೈಕಿ ಒಂದು ತನ್ನ ಮೊದಲ ಹುಟ್ಟುಹಬ್ಬಕ್ಕೆ ಮುನ್ನವೇ ಸಾವನ್ನಪ್ಪುತ್ತಿದೆ ಎನ್ನುವುದನ್ನು ರಿಜಿಸ್ಟ್ರಾರ್ ಜನರಲ್ ಆಫ್ ಇಂಡಿಯಾ (ಆರ್‌ಜಿಐ) ಬಿಡುಗಡೆಗೊಳಿಸಿರುವ ದತ್ತಾಂಶಗಳು ತೋರಿಸಿವೆ.

1971ಕ್ಕೆ ಹೋಲಿಸಿದರೆ ಭಾರತದಲ್ಲಿ ಈಗಿನ ಐಎಂಆರ್ ಆಗಿನ ದರದ ಕಾಲುಭಾಗಕ್ಕಿಂತಲೂ ಕಡಿಮೆಯಿದೆ. 1971ರಲ್ಲಿ ಪ್ರತಿ ಸಾವಿರ ಸಜೀವ ಜನನಗಳಲ್ಲಿ 129 ಶಿಶುಗಳು ಒಂದು ವರ್ಷ ತುಂಬುವ ಮೊದಲೇ ಮೃತಪಟ್ಟಿದ್ದರೆ 2020ನೇ ಸಾಲಿನಲ್ಲಿ ಈ ಪ್ರಮಾಣ 28ಕ್ಕೆ ಇಳಿದಿದೆ.

ಕಳೆದ 10 ವರ್ಷಗಳಲ್ಲಿ ಅಖಿಲ ಭಾರತ ಮಟ್ಟದಲ್ಲಿ ಐಎಂಆರ್ 44ರಿಂದ 28ಕ್ಕೆ ತಗ್ಗಿದೆ,ಅಂದರೆ ಸುಮಾರು ಶೇ.36ರಷ್ಟು ಇಳಿಕೆಯನ್ನು ಕಂಡಿದೆ.

ಆರ್‌ಜಿಐ ದತ್ತಾಂಶಗಳಂತೆ ಈ ಅವಧಿಯಲ್ಲಿ ಎಂಐಆರ್ ಗ್ರಾಮೀಣ ಪ್ರದೇಶಗಳಲ್ಲಿ 48ರಿಂದ 31ಕ್ಕೆ ಮತ್ತು ನಗರ ಪ್ರದೇಶಗಳಲ್ಲಿ 29ರಿಂದ 19ಕ್ಕೆ ಇಳಿಕೆಯಾಗಿದೆ,ಅಂದರೆ ಅನುಕ್ರಮವಾಗಿ ಸುಮಾರು ಶೇ.35 ಮತ್ತು ಶೇ.34ರಷ್ಟು ಕಡಿಮೆಯಾಗಿದೆ.

ಆದಾಗ್ಯೂ ಕಳೆದ ಕೆಲವು ದಶಕಗಳಲ್ಲಿ ಐಎಂಆರ್ ಇಳಿಕೆಯಾಗಿದ್ದರೂ ರಾಷ್ಟ್ರಮಟ್ಟದಲ್ಲಿ (ನಗರ ಮತ್ತು ಗ್ರಾಮೀಣ ಭೇದವನ್ನು ಪರಿಗಣಿಸದೆ) ಪ್ರತಿ 36 ಶಿಶುಗಳ ಪೈಕಿ ಒಂದು ತನ್ನ ಮೊದಲ ಹುಟ್ಟುಹಬ್ಬಕ್ಕೆ ಮುನ್ನವೇ ಸಾವನ್ನಪ್ಪುತ್ತಿದೆ ಎಂದು ದತ್ತಾಂಶಗಳು ಸೂಚಿಸಿವೆ.

2020ರಲ್ಲಿ ಗರಿಷ್ಠ ಐಎಂಆರ್ (43) ಮಧ್ಯಪ್ರದೇಶದಲ್ಲಿ ಮತ್ತು ಕನಿಷ್ಠ ಐಎಂಆರ್ (3) ಮಿಜೋರಾಮ್‌ನಲ್ಲಿ ವರದಿಯಾಗಿವೆ.

ಕಳೆದ ಐದು ದಶಕಗಳಲ್ಲಿ ಅಖಿಲ ಭಾರತ ಮಟ್ಟದಲ್ಲಿ ಜನನ ದರ ಗಣನೀಯವಾಗಿ ಕುಸಿದಿದೆ. 1971ರಲ್ಲಿ 36.9 ಇದ್ದ ಅದು 2020ರಲ್ಲಿ 19.5ಕ್ಕೆ ಇಳಿದಿದೆ.

ಈ ಅವಧಿಯಲ್ಲಿ ಗ್ರಾಮೀಣ-ನಗರ ಅಂತರವೂ ಕಡಿಮೆಯಾಗಿದೆ. ಆದಾಗ್ಯೂ ಕಳೆದ ಐದು ದಶಕಗಳಲ್ಲಿ ನಗರ ಪ್ರದೇಶಗಳಿಗೆ ಹೋಲಿಸಿದರೆ ಜನನ ದರವು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಮಟ್ಟದಲ್ಲಿಯೇ ಮುಂದುವರಿದಿದೆ.

 ಕಳೆದೊಂದು ದಶಕದಲ್ಲಿ ಜನನ ದರವು ಸುಮಾರು ಶೇ.11ರಷ್ಟು ಕಡಿಮೆಯಾಗಿದೆ. 2011ರಲ್ಲಿ ಶೇ.21.8ರಷ್ಟಿದ್ದ ಅದು 2020ರಲ್ಲಿ ಶೇ.19.5ಕ್ಕೆ ಇಳಿದಿದೆ. ಈ ಅವಧಿಯಲ್ಲಿ ಜನನ ದರವು ಗ್ರಾಮೀಣ ಪ್ರದೇಶಗಳಲ್ಲಿ ಶೇ.23.3ರಿಂದ ಶೇ.21.1ಕ್ಕೆ (ಸುಮಾರು ಶೇ.9ರಷ್ಟು ಇಳಿಕೆ) ಮತ್ತು ನಗರ ಪ್ರದೇಶಗಳಲ್ಲಿ ಶೇ.17.6ರಿಂದ ಶೇ.16.1ಕ್ಕೆ (ಸುಮಾರು ಶೇ.9ರಷ್ಟು ಇಳಿಕೆ) ತಗ್ಗಿದೆ.

ಶಿಶು ಮರಣ ದರವು ಒಂದು ದೇಶ ಅಥವಾ ಒಂದು ಪ್ರದೇಶದ ಒಟ್ಟಾರೆ ಆರೋಗ್ಯ ಸನ್ನಿವೇಶದ ಕಚ್ಚಾ ಸೂಚಕವಾಗಿ ವ್ಯಾಪಕವಾಗಿ ಅಂಗೀಕರಿಸಲ್ಪಟ್ಟಿದ್ದು,ನಿರ್ದಿಷ್ಟ ಅವಧಿಯಲ್ಲಿ ಮತ್ತು ನಿರ್ದಿಷ್ಟ ಪ್ರದೇಶದಲ್ಲಿ ಪ್ರತಿ ಸಾವಿರ ಸಜೀವ ಜನನಗಳಲ್ಲಿ ಒಂದು ವರ್ಷಕ್ಕೂ ಕಡಿಮೆ ಪ್ರಾಯದ ಶಿಶುಗಳ ಸಾವುಗಳ ಸಂಖ್ಯೆ ಎಂದು ವ್ಯಾಖ್ಯಾನಿಸಲಾಗಿದೆ.

ಜನನ ದರವು ಜನಸಂಖ್ಯೆಯ ಫಲವತ್ತತೆಯ ಮಾಪಕ ಮತ್ತು ಜನಸಂಖ್ಯಾ ಬೆಳವಣಿಗೆಯನ್ನು ಗುರುತಿಸುವಲ್ಲಿ ನಿರ್ಣಾಯಕವಾಗಿದೆ. ಅದು ನಿರ್ದಿಷ್ಟ ಪ್ರದೇಶದಲ್ಲಿ ಮತ್ತು ವರ್ಷದಲ್ಲಿ ಪ್ರತಿ ಸಾವಿರ ಜನಸಂಖ್ಯೆಗೆ ಸಜೀವ ಜನನಗಳ ಸಂಖ್ಯೆಯನ್ನು ತಿಳಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News