ಭಟ್ಕಳ: ಮನೆಗೆ ನುಗ್ಗಿ ಚಿನ್ನಾಭರಣ ದರೋಡೆ; ದೂರು ದಾಖಲು
ಭಟ್ಕಳ: ಇಲ್ಲಿನ ಸಾಗರ ರಸ್ತೆಯಲ್ಲಿರುವ ಪೊಲೀಸ್ ಕ್ವಾರ್ಟರ್ಸ್‍ನಲ್ಲಿ ರಾತ್ರಿ 12.45ರ ಸುಮಾರಿಗೆ ಸಂಗಮೇಶ ಧರಿಗೊಂಡ ಎನ್ನುವವರ ಮನೆಗೆ ಇಬ್ಬರು ಮುಸುಕು ಧಾರಿಗಳು ನುಗ್ಗಿ ಚಾಕುವನ್ನು ತೋರಿಸಿ ಸುಮಾರು 2 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ದರೋಡೆ ಮಾಡಿದ್ದಾರೆ ಎಂದು ನಾಗರತ್ನಾ ಸಂಗಮೇಶ ಧರಿಗೊಂಡ ನಗರ ಠಾಣೆಯಲ್ಲಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ರಾತ್ರಿ 12.45ರ ಸುಮಾರಿಗೆ ಮನೆಯೊಳಕ್ಕೆ ನುಗ್ಗಿದ ದರೋಡೆಕೋರರು ಮುಸುಕು ಹಾಕಿಕೊಂಡಿದ್ದು ಚಾಕುವನ್ನು ತೋರಿಸಿ ಬೆದರಿಸಿ ಮನೆಯಲ್ಲಿದ್ದ ಬೀರುವನ್ನು ಜಾಲಾಡಿ ವಸ್ತುಗಳನ್ನೆಲ್ಲಾ ಚೆಲ್ಲಾಪಿಲ್ಲಿ ಮಾಡಿ ಬಂಗಾರದ ಮಂಗಳಸೂತ್ರ, ಉಂಗುರ, ಕಿವಿಯೋಲೆ ಇತ್ಯಾದಿ ಒಟ್ಟೂ 2 ಲಕ್ಷ ಮೌಲ್ಯದ ಆಭರಣಗಳನ್ನು ದರೋಡೆ ಮಾಡಿಕೊಂಡು ಹೋಗಿದ್ದಾರೆ ಎಂದು ದೂರಿದ್ದಾರೆ.
ದೂರನ್ನು ದಾಖಲಿಸಿಕೊಂಡ ಸಬ್ ಇನ್ಸಪೆಕ್ಟರ್ ಎಚ್.ಬಿ. ಕುಡಗುಂಟಿ ಅವರು ಇನ್ಸಪೆಕ್ಟರ್ ದಿವಾಕರ ಪಿ.ಎಂ. ಅವರ ಮಾರ್ಗದರ್ಶನದಲ್ಲಿ ತನಿಖೆ ಕೈಗೊಂಡಿದ್ದಾರೆ. ಕಾರವಾರದಿಂದ ಶ್ವಾನದಳ, ಬೆರಳಚ್ಚು ತಜ್ಞರು ಆಗಮಿಸಿದ್ದು ದರೋಡೆಕೋರರ ಪತ್ತೆಗೆ ವಿಶೇಷ ಕಾರ್ಯಾಚರಣೆಗೆ ಇಲಾಖೆ ಕ್ರಮ ಕೈಗೊಂಡಿದೆ. ಸ್ಥಳಕ್ಕೆ ಡಿ.ವೈ.ಎಸ್.ಪಿ. ಬೆಳ್ಳಿಯಪ್ಪ ಕೆ.ಯು. ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.