ಪ್ಲಾಸ್ಟಿಕ್ ತ್ಯಜಿಸಿ, ಪರಿಸರ ಉಳಿಸಿ: ಅಜಯ್ ಸಕ್ಸೇನಾ

Update: 2022-06-05 16:34 GMT

ಪಡುಬಿದ್ರಿ: ಯಾವುದೇ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ರಸ್ತೆ ಬದಿ ಎಸೆಯದಿರಿ. ಫ್ಲಾಸ್ಟಿಕ್ ಬಳಕೆಗೆ ಸ್ವಯಂ ಕಡಿವಾಣ ಹಾಕಿಕೊಳ್ಳುವ ಮೂಲಕ ಸುತ್ತಮುತ್ತಲ ಪರಿಸರವನ್ನು ಉಳಿಸಬೇಕು ಎಂದು ಬ್ಲೂಫ್ಲ್ಯಾಗ್ ಬೀಚ್ ರಾಷ್ಟ್ರೀಯ ತೀರ್ಪುಗಾರ ಅಜಯ್ ಸಕ್ಸೇನಾ ಸಲಹೆ ನೀಡಿದರು.

ಉಡುಪಿ ಜಿಲ್ಲಾ ಪ್ರವಾಸೋದ್ಯಮ ಇಲಾಖೆ, ಅರಣ್ಯ ಇಲಾಖೆ, ಸೊಸೈಟಿ ಆಫ್ ಇಂಟಗ್ರೆಟ್ ಕೋಸ್ಟಲ್ ಮ್ಯಾನೇಜ್‍ಮೆಂಟ್, ಬೀಚ್ ಮ್ಯಾನೇಜ್‍ಮೆಂಟ್ ಕಮಿಟಿ, ಮಣ್ಣು ಉಳಿಸಿ ಸಂಘಟನೆ ಸಹಯೋಗದಲ್ಲಿ ಪಡುಬಿದ್ರಿ ಬ್ಲೂಫ್ಲ್ಯಾಗ್ ಬೀಚ್ ಕಡಲತೀರದಲ್ಲಿ ಭಾನುವಾರ ಆಯೋಜಿಸಿದ ವಿಶ್ವಪರಿಸರ ದಿನಾಚರಣೆ  ಕಾರ್ಯಕ್ರಮದಲ್ಲಿ ಮಾತನಾಡಿದರು.

ಮನೆಗಳಲ್ಲಿ ಉತ್ಪಾದನೆಯಾಗುವ ಹಸಿ ತ್ಯಾಜ್ಯವನ್ನು ಗೊಬ್ಬರವಾಗಿ ಪರಿವರ್ತಿಸಿ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಿ, ಶಾಲಾವರಣಗಳಲ್ಲಿನ ಮರಗಳ ತರೆಗೆಲೆಗಳನ್ನು ಬೆಂಕಿ ಹಾಕಿ ಸುಡದಿರಿ, ಗೊಬ್ಬರವಾಗಿ ಉಪಯೋಗಿಸಲು ಕ್ರಮವಹಿಸಿ ಸಲಹೆ ಮಾಡಿದರು. 

ಮಣ್ಣು ಉಳಿಸಿ ಸಂಘಟನೆ ಸ್ವಯಂಸೇವಕ ಸಬ್ಯತ್ ಶೆಟ್ಟಿ ಮಾತನಾಡಿ, ಭೂಮಿ ನೆರಳಿನ ಕೆಳಗೆ ಬರದ ಪರಿಣಾಮ ಬೇಸಾಯಕ್ಕೂ ಕುತ್ತು ಬರಲಿದೆ. ಪರಿಣಾಮ ಆಹಾರಕ್ಕಾಗಿ ಯುದ್ಧ ನಡೆಯುವ ಬೀತಿಯೂ ಉಂಟಾಗಲಿದೆ. ಮಣ್ಣಿನ ಫಲವತ್ತತೆ ಹೆಚ್ಚಾಗಬೇಕು. ಇದು ಆಹಾರ ತಿನ್ನುವ ಪ್ರತಿಯೊಬ್ಬನ ಜವಾಬ್ದಾರಿಯಾಗಬೇಕು ಎಂದು ವಿವರಿಸಿದರು.

ಪರಿಸರ ದಿನಾಚರಣೆ ಅಂಗವಾಗಿ ಬೀಚ್ ಆವರಣದಲ್ಲಿ ಗಿಡಗಳನ್ನು ನೆಡಲಾಯಿತು. ಅರಣ್ಯ ಇಲಾಖೆಯಿಂದ ಸಸಿಗಳನ್ನು ವಿತರಿಸಲಾಯಿತು. ಬ್ಲೂಫ್ಲ್ಯಾಗ್ ಬೀಚ್ ರಾಷ್ಟ್ರೀಯ ವೀಕ್ಷಕ ಸುಜಿತ್ ಡೋಂಗ್ರೆ, ಪಡುಬಿದ್ರಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಯಶೋಧಾ ಪೂಜಾರಿ, ಸದಸ್ಯರಾದ ಸುಜಾತ ಆಚಾರ್ಯ, ವಿದ್ಯಾಶ್ರೀ, ನಡಿಪಟ್ಣ ಮೊಗವೀರ ಅಧ್ಯಕ್ಷ ಗಂಗಾಧರ ಕರ್ಕೇರ, ಸಮಾಜ ಸೇವಕ ನವೀನ್ ಕುಮಾರ್ ಉಪಸ್ಥಿತರಿದ್ದರು.

ಬ್ಲೂಫ್ಲ್ಯಾಗ್ ಬೀಚ್ ವ್ಯವಸ್ಥಾಪಕ ಕಿರಣ್ ನಿರೂಪಿಸಿದರು. ಪ್ರವಾಸೋದ್ಯಮ ಇಲಾಖೆ ಪ್ರಭಾರ ಸಹಾಯಕ ನಿರ್ದೇಶಕ ಕ್ಲಿಫರ್ಡ್ ಲೋಬೊ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News