ಯೆಮನ್: ಕದನ ವಿರಾಮ ಜಾರಿಯಲ್ಲಿದ್ದರೂ 2 ತಿಂಗಳಲ್ಲಿ 19 ನಾಗರಿಕರ ಹತ್ಯೆ
ಜೆದ್ದಾ, ಜೂ.5: ಯೆಮನ್‌ನಲ್ಲಿ ದೇಶವ್ಯಾಪಿ ಕದನ ವಿರಾಮ ಜಾರಿಯಲ್ಲಿದ್ದರೂ ಕಳೆದ 2 ತಿಂಗಳಲ್ಲಿ 3 ಮಕ್ಕಳ ಸಹಿತ ಕನಿಷ್ಟ 19 ನಾಗರಿಕರು ಹತರಾಗಿದ್ದಾರೆ ಎಂದು ವಿಶ್ವಸಂಸ್ಥೆಯ ಅಧಿಕಾರಿಗಳು ಹೇಳಿದ್ದಾರೆ.
ಎಪ್ರಿಲ್ ಪ್ರಥಮ ವಾರದಲ್ಲಿ ಕದನ ವಿರಾಮ ಜಾರಿಗೆ ಬಂದಂದಿನಿಂದ ಬಹುತೇಕ ಹತ್ಯೆಗಳು ನೆಲಬಾಂಬ್ ಸ್ಫೋಟದಿಂದ ಸಂಭವಿಸಿವೆ. ಸುಧಾರಿತ ನೆಲಬಾಂಗ್ ಹಾಗೂ ಯುದ್ಧದ ಅವಶೇಷ(ಜೀವಂತ ಬಾಂಬ್ ಅಥವಾ ಗ್ರೆನೇಡ್) ಸ್ಫೋಟಿಸಿದ್ದರಿಂದ ಸಾವು ಸಂಭವಿಸಿದೆ.
ತಯಾರ್ ಮತ್ತು ಅಲ್‌ಡೇಲ್ ಪ್ರಾಂತದಲ್ಲಿ ಸ್ನಿಪರ್ ದಾಳಿಯಲ್ಲಿ 3 ಮಂದಿ ಮೃತಪಟ್ಟಿದ್ದು ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಶಸ್ತ್ರಾಸ್ತ್ರ ಸಜ್ಜಿತ ಡ್ರೋಣ್ ದಾಳಿಯಲ್ಲಿ ಬಾಲಕಿ ಸಹಿತ 4 ನಾಗರಿಕರು ಗಾಯಗೊಂಡಿದ್ದಾರೆ . 2 ತಿಂಗಳ ಕದನ ವಿರಾಮದ ಅವಧಿಯಲ್ಲಿ ಒಟ್ಟು 32 ನಾಗರಿಕರು ಗಾಯಗೊಂಡಿದ್ದಾರೆ ಎಂದು ಮಾನವ ಹಕ್ಕುಗಳಿಗಾಗಿನ ವಿಶ್ವಸಂಸ್ಥೆಯ ಹೈಕಮಿಷನರ್‌ನ ವಕ್ತಾರೆ ಲಿರ್ ಥ್ರೋಸೆಲ್ ಹೇಳಿದ್ದಾರೆ. ಈ ಮಧ್ಯೆ, ಯೆಮನ್‌ನಲ್ಲಿ ಕದನ ವಿರಾಮವನ್ನು ಮತ್ತೊಂದು ತಿಂಗಳು ವಿಸ್ತರಿಸುವ ಪ್ರಸ್ತಾವನೆಗೆ ಸಂಬಂಧಿತ ಎಲ್ಲಾ ಪಕ್ಷಗಳೂ ಸಹಮತ ಸೂಚಿಸಿವೆ ಎಂದು ವರದಿಯಾಗಿದೆ.
ಕದನ ವಿರಾಮದ ವಿಸ್ತರಣೆ ಸ್ವಾಗತಾರ್ಹ ಕ್ರಮವಾಗಿದ್ದು ಇದು ಶಾಶ್ವತ ಕದನವಿರಾಮವಾಗಿ ಪರಿವರ್ತನೆಯಾಗಲಿ ಎಂದು ವಿಶ್ವಸಂಸ್ಥೆ ಭದ್ರತಾ ಸಮಿತಿ ಆಶಿಸಿದೆ. ಜತೆಗೆ, ಯೆಮನ್‌ನಲ್ಲಿ ತೀವ್ರ ಬರಗಾಲದ ಅಪಾಯವಿದ್ದು ದೇಣಿಗೆದಾರರು ವಿಶ್ವಸಂಸ್ಥೆಯ ಮಾನವೀಯ ಉಪಕ್ರಮಕ್ಕೆ ನೆರವಾಗಬೇಕು ಎಂದು ವಿನಂತಿಸಿದೆ.