ಮಧ್ಯಂತರ ಜಾಮೀನು ಅವಧಿ ಮುಗಿದ ತಕ್ಷಣ ಇಮ್ರಾನ್ ಖಾನ್ ಬಂಧನ : ಪಾಕ್ ಸಚಿವ

Update: 2022-06-06 01:53 GMT
ಇಮ್ರಾನ್ ಖಾನ್

ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಜೂನ್ 2ರಂದು ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಲಾಗಿದ್ದು, ಈ ಅವಧಿ ಮುಗಿದ ತಕ್ಷಣ ಅವರ ಬನಿ ಗಾಲಾ ನಿವಾಸದ ಹೊರಗೆ ನಿಯೋಜಿಸಿರುವ ಭದ್ರತಾ ಸಿಬ್ಬಂದಿ ಇಮ್ರಾನ್ ಖಾನ್ ಅವರನ್ನು ಬಂಧಿಸಲಿದ್ದಾರೆ ಎಂದು ಆಂತರಿಕ ವ್ಯವಹಾರಗಳ ಖಾತೆ ಸಚಿವ ರಾಣಾ ಸನಾವುಲ್ಲಾ ಹೇಳಿದ್ದಾರೆ.

ಪೇಶಾವರ ಹೈಕೋರ್ಟ್ ಜೂನ್ 2ರಂದು ಇಮ್ರಾನ್ ಖಾನ್ ಅವರಿಗೆ 50 ಸಾವಿರ ರೂಪಾಯಿಗಳ ಭದ್ರತಾ ಬಾಂಡ್ ಸಲ್ಲಿಸಿದ ಬಳಿಕ ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು.

ಇಸ್ಲಾಮಾಬಾದ್‍ಗೆ ಪಿಟಿಐನ ಎರಡನೇ ಸುಧೀರ್ಘ ಯಾತ್ರೆಗೆ ಪೂರ್ವಭಾವಿಯಾಗಿ ಈ ಜಾಮೀನು ನೀಡಲಾಗಿತ್ತು. ದಂಗೆ, ದೇಶದ್ರೋಹ, ಅರಾಜಕತೆ ಮತ್ತು ಸಶಸ್ತ್ರ ದಾಳಿ ಸೇರಿದಂತೆ ಇಮ್ರಾನ್‍ ಖಾನ್ ವಿರುದ್ಧ ಎರಡು 24ಕ್ಕೂ ಅಧಿಕ ಪ್ರಕರಣಗಳಿವೆ ಎಂದು ರಾಣಾ ಸನಾವುಲ್ಲಾ ತಿಳಿಸಿದ್ದಾರೆ.

"ಪ್ರಜಾಪ್ರಭುತ್ವ ಸಮಾಜದಲ್ಲಿ ಜನರನ್ನು ಪ್ರಚೋದಿಸುವ ಹಾಗೂ ಪ್ರಜಾಸತ್ತಾತ್ಮಕ ಮತ್ತು ನೈತಿಕ ಮೌಲ್ಯಗಳ ಬಗ್ಗೆ ಗೌರವ ಇಲ್ಲದ, ರಾಜಕೀಯ ವಿರೋಧಿಗಳನ್ನು ದೇಶದ್ರೋಹಿಗಳೆಂದು ಕರೆಯುವ ವ್ಯಕ್ತಿಯೊಬ್ಬ ರಾಜಕೀಯ ಪಕ್ಷದ ಮುಖ್ಯಸ್ಥನಾಗಲು ಹೇಗೆ ಸಾಧ್ಯ?" ಎಂದು ಅವರು ಪ್ರಶ್ನಿಸಿದ್ದಾರೆ.

ಇಮ್ರಾನ್ ಖಾನ್ ಅವರನ್ನು ಇಸ್ಲಾಮಾಬಾದ್‍ಗೆ ಸ್ವಾಗತಿಸುವುದಾಗಿ ಹೇಳಿದ ಅವರು, ಕಾನೂನು ಪ್ರಕಾರ ಅಗತ್ಯ ಭದ್ರತೆ ಒದಗಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News