ಕಾನ್ಪುರ ಹಿಂಸಾಚಾರ ಪ್ರಕರಣ: ಶಂಕಿತರ ಭಾವಚಿತ್ರ ಇರುವ ಹೋರ್ಡಿಂಗ್ ಅಳವಡಿಸಲಿರುವ ಉ.ಪ್ರ. ಪೊಲೀಸ್

Update: 2022-06-06 17:28 GMT
ಸಾಂದರ್ಭಿಕ ಚಿತ್ರ

ಕಾನ್ಪುರ, ಜೂ. 6: ಕಾನ್ಪುರ ಹಿಂಸಾಚಾರದಲ್ಲಿ ಭಾಗಿಯಾದ ಪ್ರಮುಖ ಶಂಕಿತರ ಭಾವಚಿತ್ರ ಇರುವ ಹೋರ್ಡಿಂಗ್ಗಳನ್ನು ಹಿಂಸಾಚಾರ ಪೀಡಿತ ಪ್ರದೇಶದ ಸುತ್ತಮುತ್ತ ಹಾಗೂ ಪ್ರಮಖ ಸ್ಥಳಗಳಲ್ಲಿ ಉತ್ತರಪ್ರದೇಶ ಪೊಲೀಸರು ಅಳವಡಿಸಲಿದ್ದಾರೆ.

ಈ ಹೋರ್ಡಿಂಗ್ಗಳು ಪೊಲೀಸ್ ಠಾಣಾಧಿಕಾರಿಗಳು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳ ಸಂಪರ್ಕ ಸಂಖ್ಯೆಗಳನ್ನು ಹೊಂದಿರಲಿವೆ. ಆದುದರಿಂದ ಜನರು ಶಂಕಿತರ ಬಗ್ಗೆ ಮಾಹಿತಿಯನ್ನು ಪೊಲೀಸರಿಗೆ ರವಾನಿಸಬಹುದು ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ. ಹಿಂಸಾಚಾರಕ್ಕೆ ಸಂಬಂಧಿಸಿ ಪೊಲೀಸರು 9 ಮಂದಿಯನ್ನು ಬಂಧಿಸಿದ್ದಾರೆ.

ಇದರೊಂದಿಗೆ ಬಂಧಿತರ ಒಟ್ಟು ಸಂಖ್ಯೆ 38ಕ್ಕೆ ಏರಿಕೆಯಾಗಿದೆ ಎಂದು ಅವರು ಹೇಳಿದ್ದಾರೆ. ಟಿ.ವಿ. ಚರ್ಚೆ ಕಾರ್ಯಕ್ರಮದಲ್ಲಿ ಪ್ರವಾದಿ ಮುಹಮ್ಮದ್ ಅವರ ವಿರುದ್ಧ ಬಿಜೆಪಿಯ ವಕ್ತಾರೆ ನೂಪರ್ ಶರ್ಮಾ ಅವರು ನೀಡಿದ ಅವಮಾನಕರ ಹೇಳಿಕೆಯ ಆರೋಪದ ಕುರಿತಂತೆ ಕೆಲವು ವ್ಯಕ್ತಿಗಳು ಶುಕ್ರವಾರ ಅಂಗಡಿಗಳನ್ನು ಬಂದ್ ಮಾಡುವಂತೆ ಮಾಲಕರನ್ನು ಬಲವಂತಪಡಿಸಿದ್ದರು. ಇದರಿಂದ ನಗರದ ಪರೇಡ, ನಯಿ ಸಡಕ್ ಹಾಗೂ ಯತೀಂಖಾನ ಪ್ರದೇಶಗಳಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

 ‘‘ಸಿಸಿಟಿವಿ ದೃಶ್ಯಾವಳಿ ಹಾಗೂ ವೀಡಿಯೊ ತುಣುಕುಗಳ ಮೂಲಕ ನಾವು ಸುಮಾರು 100ಕ್ಕೂ ಅಧಿಕ ಕಲ್ಲು ತೂರಾಟಗಾರರು ಹಾಗೂ ಗಲಭೆಕೋರರನ್ನು ಗುರುತಿಸಿದ್ದೇವೆ’’ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ (ಕಾನೂನು ಹಾಗೂ ಸುವ್ಯವಸ್ಥೆ) ಆನಂದ್ ಪ್ರಕಾಶ್ ತಿವಾರಿ ಹೇಳಿದ್ದಾರೆ. ಶೋಧ ಕಾರ್ಯಾಚರಣೆ ಮುಂದುವರಿದಿದೆ.

ಗಲಭೆಕೋರರನ್ನು ಶೀಘ್ರದಲ್ಲಿ ಬಂಧಿಸಲು ಅಡಗುದಾಣಗಳ ಮೇಲೆ ದಾಳಿ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ. ಜೂನ್ 3ರ ಹಿಂಸಾಚಾರದಲ್ಲಿ ಭಾಗಿಯಾಗಿದ್ದಾರೆಂದು ಹೇಳಲಾದ ಸುಮಾರು 20 ಪ್ರಧಾನ ಆರೋಪಿಗಳ ಭಾವಚಿತ್ರಗಳು ಇರುವ 25 ಹೋರ್ಡಿಂಗ್ಗಳನ್ನು ಹಿಂಸಾಚಾರ ಪೀಡಿತ ಪ್ರದೇಶ ಸುತ್ತಮುತ್ತ ಹಾಗೂ ಸಮೀಪದ ಪ್ರದೇಶಗಳಲ್ಲಿ ಅಳವಡಿಸಲಾಗಿದೆ ಎಂದು ಪೊಲೀಸ್ ಉಪ ಆಯುಕ್ತ (ಪೂರ್ವ) ಪ್ರಮೋದ್ ಕುಮಾರ್ ಅವರು ಹೇಳಿದ್ದಾರೆ. ಪೊಲೀಸ್ ಠಾಣಾಧಿಕಾರಿಗಳ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳ ಸಂಪರ್ಕ ಸಂಖ್ಯೆ ಒದಗಿಸಲಾಗುವುದು ಹಾಗೂ ಜನರಲ್ಲಿ ಮನವಿ ಮಾಡಲಾಗುವುದು. ಇದರಿಂದ ಜನರು ಶಂಕಿತರನ್ನು ಗುರುತಿಸಬಹುದು ಹಾಗೂ ಪೊಲೀಸರಿಗೆ ಮಾಹಿತಿ ನೀಡಬಹುದು ಎಂದು ಡಿಸಿಪಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News