ಮಂಗಳ ಗ್ರಹಕ್ಕೆ ಜೀವಚೇತನ ರವಾನಿಸಲು ಸಾವಿರಕ್ಕೂ ಅಧಿಕ ಸ್ಟಾರ್ ಶಿಪ್ ನಿರ್ಮಾಣ ಗುರಿ: ಎಲಾನ್ ಮಸ್ಕ್
ಸ್ಯಾನ್‌ಫ್ರಾನ್ಸಿಸ್ಕೊ, ಜೂ.6: ಮಂಗಳ ಗ್ರಹಕ್ಕೆ ಜೀವಚೇತನವನ್ನು ರವಾನಿಸಲು ತನ್ನ ಸ್ಪೇಸ್‌ಎಕ್ಸ್ ಬಾಹ್ಯಾಕಾಶ ಯೋಜನೆಯ ಮೂಲಕ 1000 ಸ್ಟಾರ್‌ಶಿಪ್‌ಗಳನ್ನು ನಿರ್ಮಿಸುವ ಗುರಿ ಹೊಂದಿರುವುದಾಗಿ ಕೋಟ್ಯಾಧೀಶ ಉದ್ಯಮಿ ಎಲಾನ್ ಮಸ್ಕ್ ಸೋಮವಾರ ಹೇಳಿದ್ದಾರೆ.
ಸ್ಟಾರ್ಶಿಪ್ ಎಂಬುದು ಅಂತರ್ತಾರಾ ಪ್ರಯಾಣಕ್ಕೆ ವಿನ್ಯಾಸಗೊಳಿಸಲಾದ ಬಾಹ್ಯಾಕಾಶ ನೌಕೆಯಾಗಿದೆ. ಬಹುಗ್ರಹಗಳಲ್ಲಿ ಜೀವಚೇತನ ರೂಪಿಸುವುದರಿಂದ ಭೂಮಿಯ ಮೇಲಿನ ಪರಿಸರ ವ್ಯವಸ್ಥೆಗೆ ನೆರವಾಗಲಿದೆ. ಮನುಷ್ಯರನ್ನು ಬಿಟ್ಟರೆ ಬೇರೆ ಯಾವುದೇ ಜೀವಿಗಳು ಮಂಗಳ ಗ್ರಹಕ್ಕೆ ಜೀವಚೇತನ ಸಾಗಿಸಲು ಸಾಧ್ಯವಿಲ್ಲ ಎಂದು ಮಸ್ಕ್ ಹೇಳಿದ್ದಾರೆ. ಸ್ಪೇಸ್ಎಕ್ಸ್ ಅಭಿವೃದ್ಧಿಗೊಳಿಸುವ ಸ್ಟಾರ್‌ಶಿಪ್‌ಗಳು ಜನರು ಮತ್ತು ಸರಕನ್ನು ಚಂದ್ರ, ಮಂಗಳ ಮತ್ತು ಅದರಾಚೆಗೆ ಕರೆದೊಯ್ಯುವ ಉದ್ದೇಶ ಹೊಂದಿವೆ. ಸ್ಟಾರ್‌ಶಿಪ್‌ಗಳಲ್ಲಿ 2 ಅಂಶಗಳಿವೆ. ಪ್ರಥಮ ಹಂತದಲ್ಲಿ ಸೂಪರ್ಹೆವಿ ಎಂದು ಕರೆಯಲಾಗುವ ಬೂಸ್ಟರ್ ವ್ಯವಸ್ಥೆ ಮತ್ತು ನಂತರದ ಹಂತದಲ್ಲಿ ಮೇಲಿನ ಹಂತದ ಬಾಹ್ಯಾಕಾಶ ನೌಕೆ ಇರುತ್ತದೆ. ಇವೆರಡನ್ನೂ ಮರುಬಳಕೆಗೆ ಯೋಗ್ಯವಾದ ರೀತಿಯಲ್ಲಿ ನಿರ್ಮಿಸಲಾಗುವುದು ಎಂದವರು ಹೇಳಿದ್ದಾರೆ.