×
Ad

ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಸಹೋದರರಾದ ರಾಜೇಶ್ ಗುಪ್ತಾ ಹಾಗೂ ಅತುಲ್ ಗುಪ್ತಾ ಯುಎಇಯಲ್ಲಿ ಬಂಧನ

Update: 2022-06-07 10:12 IST
Photo:Twitter/News24

ದುಬೈ: ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷ ಜೇಕಬ್ ಜುಮಾ ಅವರ ಆಡಳಿತದಲ್ಲಿ  ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಸಹೋದರರಾದ ರಾಜೇಶ್ ಗುಪ್ತಾ ಹಾಗೂ  ಅತುಲ್ ಗುಪ್ತಾ ಅವರನ್ನು ಯುಎಇಯಲ್ಲಿನ  ಕಾನೂನು ಜಾರಿ ಅಧಿಕಾರಿಗಳು ಬಂಧಿಸಿದ್ದಾರೆ ಎಂದು ದಕ್ಷಿಣ ಆಫ್ರಿಕಾ ಸೋಮವಾರ ಹೇಳಿದೆ.

ಗುಪ್ತಾ ಸಹೋದರರಿಗೆ ಇಂಟರ್‌ಪೋಲ್ ರೆಡ್ ನೋಟಿಸ್‌ಗಳನ್ನು ನೀಡಿತ್ತು.

ಎರಡು ದೇಶಗಳು ಎಪ್ರಿಲ್ 2021 ರಲ್ಲಿ ಹಸ್ತಾಂತರ ಒಪ್ಪಂದವನ್ನು ಅಂಗೀಕರಿಸಿದವು. ಆದರೆ ಈ ಬಂಧನವು  ಸಹೋದರರು ದಕ್ಷಿಣ ಆಫ್ರಿಕಾಕ್ಕೆ ಮರಳಲು ಕಾರಣವಾಗಬಹುದೇ ಎಂಬುದು ತಕ್ಷಣವೇ ಸ್ಪಷ್ಟವಾಗಿಲ್ಲ.

2018 ರಲ್ಲಿ ಗುಪ್ತಾ ಕುಟುಂಬವು ದಕ್ಷಿಣ ಆಫ್ರಿಕಾದ ಪ್ಯಾರಾಸ್ಟಾಟಲ್ ಸಂಸ್ಥೆಗಳಿಂದ ಶತಕೋಟಿ ರಾಂಡ್‌ಗಳನ್ನು ಲೂಟಿ ಮಾಡಿದ ನಂತರ ಸ್ವಯಂ ದೇಶಭ್ರಷ್ಟರಾಗಿ ದುಬೈನಲ್ಲಿ ನೆಲೆಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

"ಯುಎಇ ಹಾಗೂ  ದಕ್ಷಿಣ ಆಫ್ರಿಕಾದ ವಿವಿಧ ಕಾನೂನು ಜಾರಿ ಸಂಸ್ಥೆಗಳ ನಡುವೆ ಚರ್ಚೆಗಳು ನಡೆಯುತ್ತಿವೆ" ಎಂದು ದಕ್ಷಿಣ ಆಫ್ರಿಕಾದ ನ್ಯಾಯ ಮತ್ತು ತಿದ್ದುಪಡಿ ಸೇವೆಗಳ ಸಚಿವಾಲಯ ಸಂಕ್ಷಿಪ್ತ ಹೇಳಿಕೆಯಲ್ಲಿ ತಿಳಿಸಿದೆ.

ಗುಪ್ತಾ ಸಹೋದರರು ದಕ್ಷಿಣ ಆಫ್ರಿಕಾದಲ್ಲಿ ಮಾಜಿ ಅಧ್ಯಕ್ಷ ಜೇಕಬ್ ಜುಮಾ ಅವರೊಂದಿಗಿನ ಉತ್ತಮ ಒಡನಾಟವನ್ನು ಆರ್ಥಿಕವಾಗಿ ಲಾಭ ಪಡೆಯಲು ಹಾಗೂ ಸಂಪುಟ ನೇಮಕಾತಿಗಳ ಮೇಲೆ ಪ್ರಭಾವ ಬೀರಲು ಬಳಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.  ಆರೋಪಗಳನ್ನು ಗುಪ್ತಾ ಸಹೋದರರು ಬಲವಾಗಿ ನಿರಾಕರಿಸಿದ್ದಾರೆ.

2009 ರಿಂದ 2018 ರವರೆಗೆ ಆಳ್ವಿಕೆ ನಡೆಸಿದ ಜೇಕಬ್ ಜುಮಾ ಅವರನ್ನು 2018 ರಲ್ಲಿ ಪದಚ್ಯುತಗೊಳಿಸಿದ ನಂತರ ಭಾರತೀಯ ಸಂಜಾತ ಸಹೋದರರು ದಕ್ಷಿಣ ಆಫ್ರಿಕಾವನ್ನು ತೊರೆದಿದ್ದರು.  ಜುಮಾ ಅವರ ಅಧಿಕಾರದ ಅವಧಿಯಲ್ಲಿ  ಭ್ರಷ್ಟಾಚಾರದ ಆರೋಪಗಳನ್ನು ಪರೀಕ್ಷಿಸಲು 2018 ರಲ್ಲಿ ವಿಚಾರಣೆಯನ್ನು ಆರಂಭಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News