ಗೋಡ್ಸೆ ನಾಮಫಲಕ ಅಳವಡಿಸಿದ ದೇಶದ್ರೋಹಿಗಳ ಬಂಧನವಾಗಲಿ : ಮಮತಾ ಗಟ್ಟಿ
ಕಾರ್ಕಳ : ಮಹಾತ್ಮ ಗಾಂಧಿ ಹಂತಕ ನಾಥೂರಾಮ್ ಗೋಡ್ಸೆ ಹೆಸರನ್ನು ಬೋಳ ಗ್ರಾಮದ ರಸ್ತೆಗೆ ಅಳವಡಿಸಿದ ದೇಶದ್ರೋಹಿಯನ್ನು ತಕ್ಷಣವೇ ಬಂಧಿಸಬೇಕೆಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಮತಾ ಗಟ್ಟಿ ಆಗ್ರಹಿಸಿದರು.
ಮಂಗಳವಾರ ಕಾರ್ಕಳ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಆಯೋಜಿಸಿ ಮಾತನಾಡಿದ ಅವರು, ಬೋಳದಲ್ಲಿ ಗೋಡ್ಸೆ ನಾಮಫಲಕ ಅಳವಡಿಸಿದ ಕುರಿತು ತನಿಖೆ ನಡೆದು ಸತ್ಯಾಂಶ ಹೊರಬಂದು ತಪ್ಪಿತಸ್ಥನಿಗೆ ಸರಿಯಾದ ಶಿಕ್ಷೆಯಾಗಬೇಕೆಂದರು.
ಗೋಡ್ಸೆ ಹೆಸರು ರಸ್ತೆಗಿಡುವ ಮೂಲಕ ರಾಷ್ಟ್ರಪಿತ ಗಾಂಧಿಗೆ ಬಹಳ ದೊಡ್ಡ ಅಪಮಾನ ಮಾಡಲಾಗಿದೆ. ಇದನ್ನು ಪಕ್ಷಭೇದ ಮರೆತು ಪ್ರತಿಯೊಬ್ಬರೂ ಖಂಡಿಸಲೇಬೇಕು. ಸಚಿವ ಸುನೀಲ್ ಕುಮಾರ್ ಅವರು ಇದು ಗ್ರಾಮ ಪಂಚಾಯತ್‌ನಿಂದಾದ ಕೆಲಸವಲ್ಲ ಎಂದು ತಿಳಿಸಿರುತ್ತಾರೆ. ಯಾರಿಂದವೇ ಆಗಲಿ, ಅಂತವರ ವಿರುದ್ಧ ದೇಶದ್ರೋಹದ ಕೇಸ್ ಹಾಕಿ ಶಿಕ್ಷೆಗೆ ಒಳಪಡಿಸಬೇಕಿದೆ. ಬೋರ್ಡ್ ಬರೆದವರ ಬಗ್ಗೆಯೂ ತನಿಖೆಯಾಗಬೇಕಿದೆ. ಈ ನಿಟ್ಟಿನಲ್ಲಿ ಪೊಲೀಸರು, ಜಿಲ್ಲಾಧಿಕಾರಿ, ಜಿ.ಪಂ. ಸಿಇಒ ಮುಂದಾಗಬೇಕು. ತಪ್ಪಿತಸ್ಥನ ಬಂಧನವಾಗದೇ ಇದ್ದಲ್ಲಿ ಕ್ಷೇತ್ರದ ಶಾಸಕ, ಸಚಿವ ಸುನೀಲ್ ಕುಮಾರ್ ಅವರು ಮಂತ್ರಿಸ್ಥಾನದಲ್ಲಿರಲು ಅನರ್ಹರು ಎಂದು ಮಮತಾ ಗಟ್ಟಿ ಹೇಳಿದರು.
ಜಿಲ್ಲಾ ಬಿಜೆಪಿ ವಕ್ತಾರ ಬಿಪಿನ್ ಚಂದ್ರ ಪಾಲ್ ಮಾತನಾಡಿ, ಸುನೀಲ್ ಕುಮಾರ್ ಹೇಳಿ ಪೊಲೀಸರು ಬಂದು ಅಳವಡಿಸಲಾದ ಬೋರ್ಡ್ ತೆಗೆಸಿದ್ದಲ್ಲ. ಯುವ ಕಾಂಗ್ರೆಸ್ ಒತ್ತಾಯಕ್ಕೆ ಮಣಿದು ತೆರವು ಮಾಡಲಾಗಿದೆ ಎಂದರು.
ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ದೇವಾಡಿಗ, ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಪೂಜಾರಿ, ಕಾರ್ಕಳ ಕಾಂಗ್ರೆಸ್ ವಕ್ತಾರ ಶುಭದ ರಾವ್, ತಾಲೂಕು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರಜನಿ ಹೆಬ್ಬಾರ್, ಪುರಸಭಾ ಸದಸ್ಯ ಸೋಮನಾಥ ನಾಯ್ಕ್, ಕಾಂಗ್ರೆಸ್ ಮುಖಂಡರಾದ ರವಿಶಂಕರ್ ಶೇರಿಗಾರ್, ಪ್ರಭಾಕರ್ ಬಂಗೇರಾ, ಜಾರ್ಜ್ ಕ್ಯಾಸ್ತೋಲಿನೋ, ಶುಭದ ಆಳ್ವಾ, ಮಲ್ಲಿಕಾ ಪಕ್ಕಲ, ಥೋಮಸ್ ಮಸ್ಕರೇನ್ಹಸ್ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದರು.