ಗೆಳತಿಯ ಜತೆ ಜಗಳಾಡಿ ಮ್ಯೂಸಿಯಂನ 5 ಮಿಲಿಯನ್ ಮೌಲ್ಯದ ಕಲಾಕೃತಿಗಳನ್ನು ಧ್ವಂಸಗೈದ ಯುವಕ
Update: 2022-06-07 23:22 IST
ನ್ಯೂಯಾರ್ಕ್, ಜೂ.7: ಗೆಳತಿಯ ಜತೆ ಜಗಳವಾಡಿದ ಯುವಕನೊಬ್ಬ ಸಮೀಪದ ಮ್ಯೂಸಿಯಂನ ಗಾಜು ಒಡೆದು ಒಳಗೆ ನುಗ್ಗಿ ಅಲ್ಲಿದ್ದ 5 ಮಿಲಿಯನ್ ಡಾಲರ್ ಮೌಲ್ಯದ ಅಮೂಲ್ಯ ಕಲಾಕೃತಿಯನ್ನು ಧ್ವಂಸಗೊಳಿಸಿದ ಘಟನೆ ಅಮೆರಿಕದ ಡಲ್ಲಾಸ್ ಆರ್ಟ್ ಮ್ಯೂಸಿಯಂನಲ್ಲಿ ನಡೆದಿದೆ.
ಆರೋಪಿ 21 ವರ್ಷದ ಬ್ರಿಯಾನ್ ಹರ್ನಾಂಡೆಸ್ ಎಂಬ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಗೆಳತಿಯ ಜತೆ ಜಗಳವಾಡಿದ ಸಿಟ್ಟಿನಲ್ಲಿ ಮ್ಯೂಸಿಯಂನ ಗಾಜಿನ ಬಾಗಿಲನ್ನು ಕುರ್ಚಿಯಿಂದ ಒಡೆದು ಹಾಕಿದ ಬಳಿಕ ಅಲ್ಲಿದ್ದ ಹಲವು ಪುರಾತನ ಕಲಾಕೃತಿಗಳನ್ನು ಒಡೆದು ಹಾಕಿದ್ದಾನೆ. ಇದರಲ್ಲಿ 2,500 ವರ್ಷ ಹಿಂದಿನ ಗ್ರೀಕ್ ಕಲಾಕೃತಿ, ಅಮೆರಿಕದ ಬುಡಕಟ್ಟು ಸಮುದಾಯದ ಕಲಾಕೃತಿ, ಪ್ರಾಚೀನ ಗ್ರೀಕ್‌ನ ಲೋಟ ಹಾಗೂ ಮ್ಯೂಸಿಯಂನ ಫೋನ್, ಕಂಪ್ಯೂಟರ್ ಹಾಗೂ ಬೆಂಚನ್ನು ಮುರಿದು ಹಾಕಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.ಆಗಿರುವ ನಷ್ಟವನ್ನು ಅಂದಾಜಿಸಲು ವಿಮಾ ಸಂಸ್ಥೆಯನ್ನು ಸಂಪರ್ಕಿಸಲಾಗಿದೆ ಎಂದು ಮ್ಯೂಸಿಯಂನ ವ್ಯವಸ್ಥಾಪಕರು ಹೇಳಿದ್ದಾರೆ.