×
Ad

ಸಲ್ಮಾನ್ ಖಾನ್‌ಗೆ ಬೆದರಿಕೆ ಪತ್ರ: ಸಿಧು ಮೂಸೆವಾಲಾ ಹತ್ಯೆ ಪ್ರಕರಣದ ಆರೋಪಿಯನ್ನು ಪ್ರಶ್ನಿಸಿದ ಪೊಲೀಸರು

Update: 2022-06-09 13:22 IST
Photo:PTI

ಮುಂಬೈ: ನಟ ಸಲ್ಮಾನ್ ಖಾನ್ ಹಾಗೂ  ಅವರ ತಂದೆಗೆ ಬೆದರಿಕೆ ಪತ್ರದ ಕುರಿತು ತನಿಖೆ ನಡೆಸುತ್ತಿರುವ ಮುಂಬೈ ಕ್ರೈಂ ಬ್ರಾಂಚ್ ತಂಡವು ಗುರುವಾರ ನೆರೆಯ ಪುಣೆ ನಗರಕ್ಕೆ ತಲುಪಿದ್ದು, ಜನಪ್ರಿಯ ಗಾಯಕ ಹಾಗೂ  ಕಾಂಗ್ರೆಸ್ ನಾಯಕ ಸಿಧು ಮೂಸೆವಾಲಾ ಹತ್ಯೆ ಪ್ರಕರಣದಲ್ಲಿ ಬಂಧಿತನಾಗಿರುವ ಸಿದ್ಧೇಶ್ ಹಿರಾಮನ್ ಕಾಂಬ್ಳೆ ಅಲಿಯಾಸ್ ಮಹಾಕಾಲ್ ನನ್ನು ವಿಚಾರಣೆ ನಡೆಸುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

 ರವಿವಾರ ಮುಂಬೈನ ಬಾಂದ್ರಾ ಪ್ರದೇಶದ ಬೆಂಚ್‌ನಲ್ಲಿ ಬೆದರಿಕೆ ಪತ್ರವನ್ನು ಯಾರು ಇಟ್ಟಿದ್ದಾರೆ ಎಂಬ ಬಗ್ಗೆಯೂ ಪೊಲೀಸರು ಕಾಂಬ್ಳೆ ಅವರನ್ನು ಪ್ರಶ್ನಿಸಲಿದ್ದಾರೆ ಎಂದು ಅವರು ಹೇಳಿದರು.

ಬುಧವಾರ ಪುಣೆ ಗ್ರಾಮಾಂತರ ಪೊಲೀಸರಿಂದ ಬಂಧಿಸಲ್ಪಟ್ಟಿರುವ ಕಾಂಬ್ಳೆ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್‌ನ ಸದಸ್ಯನಾಗಿದ್ದಾನೆ ಎಂದು ಮಹಾರಾಷ್ಟ್ರ ಪೊಲೀಸರು ಈ ಹಿಂದೆ ತಿಳಿಸಿದ್ದರು.

ಗುರುವಾರ ಬೆಳಗ್ಗೆ ಮುಂಬೈನ ಡೆಪ್ಯುಟಿ ಕಮಿಷನರ್ ಆಫ್ ಪೋಲೀಸ್ (ಅಪರಾಧ) ಸಂಗ್ರಾಮಸಿಂಗ್ ನಿಶಾಂದರ್ ನೇತೃತ್ವದ ತಂಡವು ಪುಣೆಯ ಅಪರಾಧ ವಿಭಾಗದ ಕಚೇರಿಯನ್ನು ತಲುಪಿ ಕಾಂಬ್ಳೆಯನ್ನು ವಿಚಾರಣೆಗೆ ಒಳಪಡಿಸಲು ಆರಂಭಿಸಿತು ಎಂದು ಅಧಿಕಾರಿ ತಿಳಿಸಿದ್ದಾರೆ.

ಖ್ಯಾತ ಚಿತ್ರಕಥೆ ಬರಹಗಾರ ಸಲೀಂ ಖಾನ್ ಹಾಗೂ  ಅವರ ನಟ ಸಲ್ಮಾನ್ ಖಾನ್ ಅವರಿಗೆ ಬೆದರಿಕೆ ಪತ್ರವನ್ನು ಬಿಷ್ಣೋಯಿ ಗ್ಯಾಂಗ್ ಸದಸ್ಯರು ಮುಂಬೈನ ಬೆಂಚ್ ಮೇಲೆ ಇರಿಸಿದ್ದಾರೆಯೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

 ರವಿವಾರ ಸಲ್ಮಾನ್ ಖಾನ್ ಅವರ ತಂದೆ ಸಲೀಂ ಖಾನ್ ಅವರು ಬೆಳಗಿನ ವಾಕ್ ಮುಗಿಸಿ ಬಾಂದ್ರಾ ಬ್ಯಾಂಡ್‌ಸ್ಟ್ಯಾಂಡ್‌ನಲ್ಲಿ ಬೆಂಚ್ ಮೇಲೆ ಕುಳಿತಿದ್ದಾಗ ಅಪರಿಚಿತ ವ್ಯಕ್ತಿಯೊಬ್ಬ ಸಲೀಂ  ಅವರ ಮಗ ಹಾಗೂ ನಟ ಸಲ್ಮಾನ್ ಖಾನ್ ಅವರನ್ನು ಕೊಲ್ಲುವ ಬೆದರಿಕೆಯ ಪತ್ರವನ್ನು ಅಲ್ಲಿ ಇಟ್ಟಿದ್ದ.

ನಂತರ  ತನ್ನ ಭದ್ರತಾ ಸಿಬ್ಬಂದಿಯ ಸಹಾಯದಿಂದ  ಸಲೀಂ ಖಾನ್ ಪೊಲೀಸರನ್ನು ಸಂಪರ್ಕಿಸಿದರು ಹಾಗೂ  ಬಾಂದ್ರಾ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 506-II (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News