ಪ್ರತಿ ಒಂದು ಕೆಜಿ ತೂಕ ಇಳಿಕೆಗೆ ರೂ. 1000 ಕೋಟಿ ಅನುದಾನ: ಸಚಿವ ಗಡ್ಕರಿ ಸವಾಲು ಸ್ವೀಕರಿಸಿ ಶ್ರಮ ಪಡುತ್ತಿರುವ ಸಂಸದ

Update: 2022-06-11 14:55 GMT

ಭೋಪಾಲ,ಜೂ.11: ಬಿಜೆಪಿಯ ಉಜ್ಜೈನ ಸಂಸದ ಅನಿಲ್ ಫಿರೋಜಿಯಾ ಅವರು ತನ್ನ ಶರೀರದಲ್ಲಿಯ ಹೆಚ್ಚಿನ ಕೊಬ್ಬನ್ನು ಕರಗಿಸುವ ಕಸರತ್ತಿನಲ್ಲಿ ತೊಡಗಿದ್ದಾರೆ. ಫಿಟ್ ಆಗಿರುವುದು ಮಾತ್ರವಲ್ಲ,ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಅವರು ಭರವಸೆ ನೀಡಿರುವಂತೆ ತನ್ನ ಲೋಕಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಹಣಕಾಸು ಪಡೆಯುವುದೂ ಅವರ ಉದ್ದೇಶವಾಗಿದೆ.

ಕಳೆದ ಫೆಬ್ರವರಿಯಲ್ಲಿ ಮಧ್ಯಪ್ರದೇಶದ ಮಾಲ್ವಾ ಪ್ರದೇಶದಲ್ಲಿ 5,772 ಕೋ.ರೂ.ವೆಚ್ಚದ 11 ರಸ್ತೆ ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸಿದ್ದ ಸಂದರ್ಭ ಗಡ್ಕರಿಯವರು ಫಿರೋಜಿಯಾರಿಗೆ ಸವಾಲು ಒಡ್ಡಿದ್ದರು.

‘ಪ್ರದೇಶದ ಅಭಿವೃದ್ಧಿಗಾಗಿ ಫಿರೋಜಿಯಾ ನಿರಂತರ ಹಣವನ್ನು ಕೇಳುತ್ತಲೇ ಇರುತ್ತಾರೆ. ನಾನು ಅವರಿಗೆ ಒಂದು ಷರತ್ತು ವಿಧಿಸುತ್ತಿದ್ದೇನೆ. 135 ಕೆ.ಜಿ.ತೂಕವಿದ್ದ ನಾನೀಗ 93 ಕೆ.ಜಿ.ಇದ್ದೇನೆ. ನನ್ನ ಹಳೆಯ ಪೋಟೊವನ್ನು ಅವರಿಗೆ ತೋರಿಸಿದ್ದೇನೆ. ಜನರು ನನ್ನನ್ನು ಗುರುತಿಸುವುದಿಲ್ಲ. ಫಿರೋಜಿಯಾ ಕಡಿಮೆ ಮಾಡಿಕೊಳ್ಳುವ ಪ್ರತಿ ಕೆ.ಜಿ.ಗೂ ಉಜ್ಜೈನಿಯ ಅಭಿವೃದ್ಧಿಗಾಗಿ 1,000 ಕೋ.ರೂ.ನೀಡುತ್ತೇನೆ ’ ಎಂದು ಗಡ್ಕರಿ ಹೇಳಿದ್ದರು.

ಫೆಬ್ರವರಿಯಲ್ಲಿ 125 ಕೆ.ಜಿ.ತೂಕವಿದ್ದ ಫಿರೋಜಿಯಾ ಅಲ್ಲಿಂದೀಚೆಗೆ ತನ್ನ ತೂಕವನ್ನು ಕಡಿಮೆ ಮಾಡಿಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆ.

‘ನಾನು ಕಳೆದುಕೊಳ್ಳುವ ಪ್ರತಿ ಕೆ.ಜಿ.ತೂಕಕ್ಕೂ ಕ್ಷೇತ್ರದ ಅಭಿವೃದ್ಧಿಗಾಗಿ 1,000 ಕೋ.ರೂ.ನೀಡುವುದಾಗಿ ಗಡ್ಕರಿಜಿ ವೇದಿಕೆಯಲ್ಲಿ ಪ್ರಕಟಿಸಿದ್ದರು. ಈಗಾಗಲೇ ನಮಗೆ ಸುಮಾರು 6,000 ಕೋ.ರೂ.ಗಳು ಲಭಿಸಿವೆ. ಮಳೆಗಾಲದ ಅಧಿವೇಶನದಲ್ಲಿ ಅವರನ್ನು ಭೇಟಿಯಾಗಿ ವಾಗ್ದಾನದ ಬಗ್ಗೆ ನೆನಪಿಸುತ್ತೇನೆ ’ಎಂದು ಸುದ್ದಿಗಾರರೊಂದಿಗೆ ಮತನಾಡಿದ ಫಿರೋಜಿಯಾ ತಿಳಿಸಿದರು.

ಫಿರೋಜಿಯಾ ಕಟ್ಟುನಿಟ್ಟಿನ ಪಥ್ಯವನ್ನು ಅನುಸರಿಸುತ್ತಿದ್ದು,ದಿನದ ಒಂದೆರಡು ಗಂಟೆಗಳ ಸಮಯವನ್ನು ದೈಹಿಕ ವ್ಯಾಯಾಮಕ್ಕಾಗಿ ಮೀಸಲಿಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News