×
Ad

ಪ್ರವಾದಿ ನಿಂದನೆ ವಿರೋಧಿ ಪ್ರತಿಭಟನೆಯಲ್ಲಿ ಹಿಂಸಾಚಾರ: ಬುಲ್ಡೋಝರ್‌ ಬಳಸಿ ಆರೋಪಿಗಳ ಮನೆ ಧ್ವಂಸಗೊಳಿಸಿದ ಉ.ಪ್ರ ಸರ್ಕಾರ

Update: 2022-06-11 19:34 IST
Photo: Twitter

ಲಖ್ನೋ: ಅಮಾನತುಗೊಂಡಿರುವ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಅವರು ಪ್ರವಾದಿ ಮಹಮ್ಮದ್ ಅವರ ಕುರಿತು ನೀಡಿದ ನಿಂದನಾತ್ಮಕ ಹೇಳಿಕೆ ವಿರುದ್ಧ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ಒಂದು ದಿನದ ಬಳಿಕ, ಉತ್ತರ ಪ್ರದೇಶ ಪೊಲೀಸರು ಸಹರಾನ್‌ಪುರದಲ್ಲಿ ಪ್ರತಿಭಟನಾಕಾರರ ಮನೆಗಳನ್ನು ಬುಲ್ಡೋಝರ್‌ ಬಳಸಿ ನೆಲಸಮಗೊಳಿಸಿದ್ದಾರೆ ಎಂದು Ndtv.com ವರದಿ ಮಾಡಿದೆ.  ಸಹರಾನ್‌ ಪುರದಲ್ಲಿ ಶಾಂತಿ ಮತ್ತು ಸಾಮಾಜಿಕ ಸಾಮರಸ್ಯವನ್ನು ಕದಡಿದ್ದಕ್ಕಾಗಿ ಇದುವರೆಗೆ 64 ಜನರನ್ನು ಬಂಧಿಸಲಾಗಿದೆ. 

ಸ್ಥಳೀಯ ಆಡಳಿತದೊಂದಿಗೆ ಆರೋಪಿ ಮುಝಮ್ಮಿಲ್ ಮತ್ತು ಅಬ್ದುಲ್ ವಾಕಿರ್ ಅವರ ನಿವಾಸಗಳನ್ನು ತಲುಪಿದ ಪೊಲೀಸರು ಅಕ್ರಮ ನಿರ್ಮಾಣಗಳು ಎಂದು ಆರೋಪಿಸಿ ಅವರ ಮನೆಗಳ ಭಾಗಗಳನ್ನು ನೆಲಸಮಗೊಳಿಸಿದ್ದಾರೆ.

ಭಾರೀ ಪೊಲೀಸ್ ನಿಯೋಜನೆಯ ನಡುವೆ ಬುಲ್ಡೋಜರ್‌ಗಳು ಎರಡು ಮನೆಗಳನ್ನು ಕೆಡವುತ್ತಿರುವುದು ವೈರಲ್‌ ಆದ ವಿಡಿಯೋದಲ್ಲಿ ದಾಖಲಾಗಿದೆ. 

ಇಬ್ಬರು ಬಿಜೆಪಿ ನಾಯಕರು ಪ್ರವಾದಿ ಮುಹಮ್ಮದ್ ಅವರ ವಿರುದ್ಧ ಆಕ್ಷೇಪಾರ್ಹ ಮತ್ತು ಕೋಮುವಾದಿ ಹೇಳಿಕೆ ನೀಡಿರುವುದನ್ನು ವಿರೋಧಿಸಿ ನಡೆದ ಪ್ರತಿಭಟನೆ ಹಿಂಸಾತ್ಮಕ ರೂಪಕ್ಕೆ ತಿರುಗಿದ್ದು, ರಾಜ್ಯದಲ್ಲಿ ಇದುವರೆಗೆ 230 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. ಏಳು ಜಿಲ್ಲೆಗಳಲ್ಲಿ 11 ಪ್ರಕರಣಗಳು ದಾಖಲಾಗಿವೆ ಎಂದು ವರದಿಯಾಗಿದೆ

ಎನ್‌ಡಿಟಿವಿಯೊಂದಿಗೆ ಮಾತನಾಡಿದ ಯುಪಿ ಪೊಲೀಸ್‌ನ ಹೆಚ್ಚುವರಿ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಪ್ರಶಾಂತ್ ಕುಮಾರ್, ರಾಜ್ಯದಲ್ಲಿ ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ ಮತ್ತು ಹಿಂಸಾಚಾರಕ್ಕೆ ಕಾರಣರಾದವರ ವಿರುದ್ಧ ಪೊಲೀಸರು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News