×
Ad

ಹರಿಯಾಣ: ಅಡ್ಡ ಮತದಾನ ಮಾಡಿದ ಶಾಸಕನನ್ನು ಉಚ್ಛಾಟಿಸಿದ ಕಾಂಗ್ರೆಸ್

Update: 2022-06-11 20:11 IST
ಶಾಸಕ ಕುಲದೀಪ್ ಬಿಷ್ಣೋಯ್ (Photo: Twitter/ndtv)

ಚಂಡೀಗಢ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಇಂದು ಹರಿಯಾಣ ಕಾಂಗ್ರೆಸ್ ಶಾಸಕ ಕುಲದೀಪ್ ಬಿಷ್ಣೋಯ್ ಅವರನ್ನು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ವಿಶೇಷ ಆಹ್ವಾನಿತ ಹುದ್ದೆ ಸೇರಿದಂತೆ ಪಕ್ಷದ ಎಲ್ಲಾ ಸ್ಥಾನಗಳಿಂದ ತಕ್ಷಣದಿಂದ ಜಾರಿಗೆ ಬರುವಂತೆ ಉಚ್ಚಾಟಿಸಿದ್ದಾರೆ. ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ್ದಕ್ಕಾಗಿ ಆದಂಪುರ ಶಾಸಕ ಕುಲದೀಪ್ ಬಿಷ್ಣೋಯ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಹರ್ಯಾಣ ಕಾಂಗ್ರೆಸ್ ಮೂಲಗಳು ಈ ಹಿಂದೆ ಸೂಚಿಸಿದ್ದವು.

ಕಾಂಗ್ರೆಸ್ ಅಭ್ಯರ್ಥಿ ಅಜಯ್ ಮಾಕೆನ್ ಅವರು ಗೆಲ್ಲುವುದು ಖಚಿತ ಎಂದು ಭಾವಿಸಲಾಗಿತ್ತು. ಆದರೆ, ಬಿಷ್ಣೋಯ್ ಅಡ್ಡ ಮತದಾನ ಮಾಡಿದ್ದು, ಮತ್ತು ಇನ್ನೊಬ್ಬ ಶಾಸಕರ ಮತವನ್ನು ಅಸಿಂಧು ಎಂದು ಘೋಷಿಸಿದ ಬಳಿಕ ಅಜಯ್‌ ಮಾಕೆನ್ ರಾಜ್ಯಸಭಾ ಸ್ಥಾನವನ್ನು ಪಡೆಯಲು ವಿಫಲರಾಗಿದ್ದರು.

ಕಾಂಗ್ರೆಸ್ ಪ್ರಕಾರ, ಬಿಷ್ಣೋಯ್ ಅವರು ಪಕ್ಷದ ಅಭ್ಯರ್ಥಿ ಮಾಕೆನ್‌ಗೆ ಮತ ಹಾಕುವ ಬದಲು, ಬಿಜೆಪಿ ಮತ್ತು ಅದರ ಮಿತ್ರ ಪಕ್ಷವಾದ ಜನನಾಯಕ ಜನತಾ ಪಾರ್ಟಿಯಿಂದ ಬೆಂಬಲಿತ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕಾರ್ತಿಕೇಯ ಶರ್ಮಾ ಅವರಿಗೆ ಅಡ್ಡ ಮತದಾನ ಮಾಡಿದ್ದಾರೆ.

"ಕಾಂಗ್ರೆಸ್ ಅಧ್ಯಕ್ಷರು ತಕ್ಷಣದಿಂದಲೇ ಜಾರಿಗೆ ಬರುವಂತೆ ಕುಲದೀಪ್ ಬಿಷ್ಣೋಯ್ ಅವರನ್ನು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ವಿಶೇಷ ಆಹ್ವಾನಿತ ಹುದ್ದೆ ಸೇರಿದಂತೆ ಎಲ್ಲಾ ಪಕ್ಷದ ಸ್ಥಾನಗಳಿಂದ ಉಚ್ಚಾಟಿಸಿದ್ದಾರೆ" ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News