ಉಕ್ರೇನ್‌ನಲ್ಲಿ ಕಾಲರಾ ಹರಡುವ ಆತಂಕ

Update: 2022-06-11 15:09 GMT

ಕೀವ್, ಜೂ.11: ದೇಶದ ಪ್ರಮುಖ ನಗರದೊಳಗೆ ಮುಂದೊತ್ತಿ ಬರುತ್ತಿರುವ ರಶ್ಯ ಸೇನೆಗೆ ತಡೆಯೊಡ್ಡಲು ಶಸ್ತ್ರಾಸ್ತ್ರಗಳ ಕೊರತೆಯ ಜತೆಗೆ ಇದೀಗ ಹೊಸದೊಂದು ಸಮಸ್ಯೆ ಸೃಷ್ಟಿಯಾಗಿದೆ. ರಶ್ಯದ ದಾಳಿಯಲ್ಲಿ ಹತರಾದವರ ಮೃತದೇಹಗಳು ರಸ್ತೆಯಲ್ಲಿಯೇ ಕೊಳೆತು ಕಾಲರಾ ರೋಗ ಹರಡುವ ಆತಂಕ ಮೂಡಿದೆ ಎಂದು ಉಕ್ರೇನ್ ಅಧಿಕಾರಿಗಳು ಶನಿವಾರ ಹೇಳಿದ್ದಾರೆ.

ಮರಿಯುಪೋಲ್‌ನಲ್ಲಿ ವೇಗವಾಗಿ ಹರಡುತ್ತಿರುವ ಕಾಲರಾ ನಿಯಂತ್ರಿಸಲು ಮಾನವೀಯ ನೆರವಿನ ಉಪಕ್ರಮಗಳನ್ನು ಎದುರು ನೋಡುತ್ತಿರುವುದಾಗಿ ಉಕ್ರೇನ್ ಸಂದೇಶ ರವಾನಿಸಿದೆ. ಪೂರ್ವದ ಸಿವಿರೊಡೊನೆಟ್ಸ್ಕ್ ನಗರದಲ್ಲಿ ರಶ್ಯದ ಸೇನೆ ತೀವ್ರಗತಿಯಲ್ಲಿ ಮುನ್ನಡೆ ಸಾಧಿಸಿದೆ. ಇದೀಗ ಪೂರ್ವ ಪ್ರಾಂತದತ್ತ ಗಮನ ಕೇಂದ್ರೀಕರಿಸಿರುವ ರಶ್ಯ ಫಿರಂಗಿ ಯುದ್ಧದಲ್ಲಿ ತೊಡಗಿದ್ದು ಉಕ್ರೇನ್ ವಿರುದ್ಧ ಸಂಪೂರ್ಣ ಮೇಲುಗೈ ಸಾಧಿಸಿದೆ. ಅಮೆರಿಕ ಮತ್ತದರ ಮಿತ್ರಪಕ್ಷಗಳು ಉಕ್ರೇನ್‌ಗೆ ತಕ್ಷಣ ಶಸ್ತ್ರಾಸ್ತ್ರ ರವಾನಿಸದಿದ್ದರೆ ಈ ನಗರವೂ ಉಕ್ರೇನ್‌ನ ಕೈತಪ್ಪಿ ಹೋಗಲಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಹೋರಾಟ ಇದೀಗ ಫಿರಂಗಿ ಯುದ್ಧವಾಗಿ ಬದಲಾಗಿದೆ. ನಮಗಿಂತ 15 ಪಟ್ಟು ಅಧಿಕ ಫಿರಂಗಿ ರಶ್ಯದ ಬಳಿಯಿದೆ. ಈಗ ಪರಿಸ್ಥಿತಿ ಪಾಶ್ಚಿಮಾತ್ಯರು ನಮಗೆ ರವಾನಿಸುವ ಶಸ್ತ್ರಾಸ್ತ್ರಗಳನ್ನು ಅವಲಂಬಿಸಿದೆ ಎಂದು ಉಕ್ರೇನ್‌ನ ಮಿಲಿಟರಿ ಗುಪ್ತಚರ ಘಟಕದ ಉಪ ಮುಖ್ಯಸ್ಥ ವ್ಯಾಡಿಮ್ ಸ್ಕಿಬಿಟ್ಸ್ಕಿ ಹೇಳಿರುವುದಾಗಿ ಬ್ರಿಟನ್‌ನ ‘ಗಾರ್ಡಿಯನ್’  ಪತ್ರಿಕೆ ವರದಿ ಮಾಡಿದೆ. ರಶ್ಯದ ಆಕ್ರಮಣದ ಬಳಿಕ ಉಕ್ರೇನ್‌ಗೆ ಅತ್ಯಧಿಕ ಶಸ್ತ್ರಾಸ್ತ್ರ ಪೂರೈಸಿದ ದೇಶಗಳ ಪಟ್ಟಿಯಲ್ಲಿ ಜರ್ಮನಿಯೂ ಸ್ಥಾನ ಪಡೆದಿದೆ. ಆದರೆ ಈ ದೇಶದ ಶಸ್ತ್ರಾಸ್ತ್ರ ನೆರವಿನ ಉಪಕ್ರಮ ಅತ್ಯಂತ ನಿಧಾನಗತಿಯಲ್ಲಿ ಮುಂದುವರಿಯುತ್ತಿದೆ ಎಂದು ವ್ಯಾಪಕ ಟೀಕೆ ವ್ಯಕ್ತವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News