ಪ್ರವಾದಿ ನಿಂದನೆ: ಬಿಜೆಪಿಯ ಉಚ್ಚಾಟಿತ ನಾಯಕ ಜಿಂದಾಲ್ ವಿರುದ್ಧ ಪ್ರಕರಣ ದಾಖಲಿಸಿದ ಪುಣೆ ಸಿಟಿ ಪೊಲೀಸರು
ಪುಣೆ: ಪ್ರವಾದಿ ಮುಹಮ್ಮದ್ ಅವರ ಕುರಿತು ಟ್ವಿಟರ್ ನಲ್ಲಿ ಆಕ್ಷೇಪಾರ್ಹ ಪೋಸ್ಟ್ ಹಾಕಿದ್ದ ಭಾರತೀಯ ಜನತಾ ಪಕ್ಷದ ಉಚ್ಛಾಟಿತ ನಾಯಕ ನವೀನ್ ಕುಮಾರ್ ಜಿಂದಾಲ್ ವಿರುದ್ಧ ಪುಣೆ ಸಿಟಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಿಠಾ ನಗರದ ನಿವಾಸಿ ಝಾಕಿರ್ ಶೇಖ್ ಶುಕ್ರವಾರ ಕೊಂಡ್ವಾ ಪೊಲೀಸ್ ಠಾಣೆಯಲ್ಲಿ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಿದ್ದಾರೆ.
ಎಫ್ ಐಆರ್ ಪ್ರಕಾರ, ದೂರುದಾರರು ಜೂನ್ 2 ರಂದು ಟ್ವಿಟರ್ ನಲ್ಲಿ ಪ್ರವಾದಿ ಮುಹಮ್ಮದ್ ಅವರ ಬಗ್ಗೆ ಜಿಂದಾಲ್ ಅವರ ಆಕ್ಷೇಪಾರ್ಹ ಪೋಸ್ಟ್ ಅನ್ನು ನೋಡಿದ್ದಾರೆ. ಜಿಂದಾಲ್ ಅವರ ಪೋಸ್ಟ್ ಮುಸ್ಲಿಮರ ಭಾವನೆಗೆ ಧಕ್ಕೆ ತಂದಿದೆ ಎಂದು ಶೇಖ್ ಹೇಳಿದ್ದಾರೆ.
ಪೊಲೀಸರು ಈ ಪ್ರಕರಣದಲ್ಲಿ ಜಿಂದಾಲ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 143 (ಎ), 153 (ಬಿ), 295 (ಎ), 298 ಹಾಗೂ 505 (2) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಜ್ಞಾನವಾಪಿ ಮಸೀದಿ ಕುರಿತು ಇತ್ತೀಚಿನ ಸುದ್ದಿ ಚರ್ಚೆಯ ಸಂದರ್ಭದಲ್ಲಿ ಪ್ರವಾದಿ ಮುಹಮ್ಮದ್ ವಿರುದ್ಧ ಹೇಳಿಕೆ ನೀಡಿದ್ದಕ್ಕಾಗಿ ಅಮಾನತುಗೊಂಡ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ವಿರುದ್ಧ ಪುಣೆ ಸಿಟಿ ಪೊಲೀಸ್ ಠಾಣೆಯಲ್ಲಿ ಈ ಹಿಂದೆ ಎಫ್‌ಐಆರ್ ದಾಖಲಾಗಿತ್ತು. ಶರ್ಮಾ ವಿರುದ್ಧ ಕೋಂಡ್ವಾದ ಮಾಜಿ ಎನ್‌ಸಿಪಿ ಕಾರ್ಪೊರೇಟರ್ ಅಬ್ದುಲ್ ಗಫೂರ್ ಅಹ್ಮದ್ ಪಠಾಣ್ ದೂರನ್ನು ಸಲ್ಲಿಸಿದ್ದಾರೆ.