ಉತ್ತರಪ್ರದೇಶ: ಪ್ರತಿಭಟನಾಕಾರರನ್ನು ಲಾಕ್‌ಅಪ್‌ನಲ್ಲಿ ಪೊಲೀಸರು ಥಳಿಸುವ ವೀಡಿಯೊ ಟ್ವೀಟ್ ಮಾಡಿದ ಅಖಿಲೇಶ್ ಯಾದವ್

Update: 2022-06-12 08:15 GMT
Photo: Screengrab from the video 

ಲಕ್ನೊ:  ಉತ್ತರಪ್ರದೇಶದ ಪೊಲೀಸರು ಲಾಕ್‌ಅಪ್‌ನಲ್ಲಿ ಪ್ರತಿಭಟನಾಕಾರರನ್ನು  ಥಳಿಸುತ್ತಿರುವ ವೀಡಿಯೊವೊಂದನ್ನು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್  ಶನಿವಾರ ರಾತ್ರಿ ಟ್ವೀಟ್ ಮಾಡಿದ್ದಾರೆ.

"ಇಂತಹ ಲಾಕ್ ಅಪ್ ಬಗ್ಗೆ ಪ್ರಶ್ನೆಗಳನ್ನು ಎತ್ತಬೇಕು.  ಇಲ್ಲದಿದ್ದರೆ ತಪ್ಪೊಪ್ಪಿಗೆಯಲ್ಲಿ ಯಾವುದೇ ನ್ಯಾಯವಿಲ್ಲ" ಎಂದು ಪೊಲೀಸರು ಥಳಿಸುತ್ತಿರುವ ವೀಡಿಯೊ ಟ್ಯಾಗ್ ಮಾಡಿ ಅಖಿಲೇಶ್ ಯಾದವ್ ಟ್ವಿಟರ್ ನಲ್ಲಿ ಬರೆದಿದ್ದಾರೆ.

"ಪೊಲೀಸ್ ಕಸ್ಟಡಿಯಲ್ಲಿ ಹೆಚ್ಚಿನ ಸಾವು ವಿಚಾರಕ್ಕೆ ಬಂದಾಗ ಉತ್ತರ ಪ್ರದೇಶವು ಮೊದಲ ಸ್ಥಾನದಲ್ಲಿದೆ. ಮಾನವ ಹಕ್ಕುಗಳ ಉಲ್ಲಂಘನೆಯಲ್ಲಿ ಉತ್ತರಪ್ರದೇಶ ಅಗ್ರಸ್ಥಾನದಲ್ಲಿದೆ ಹಾಗೂ  ದಲಿತರ ಮೇಲೆ ದಬ್ಬಾಳಿಕೆಯಲ್ಲೂ  ಮುಂದಿದೆ'' ಎಂದು  ಆರೋಪಿಸಿ ಯಾದವ್ ಟ್ವೀಟ್ ಮಾಡಿದ್ದಾರೆ.

ಈ ವೀಡಿಯೊ  ಶನಿವಾರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಜಿಲ್ಲೆಯಲ್ಲಿ ಗಲಭೆ ಹಾಗೂ  ಕಲ್ಲು ತೂರಾಟದ ಆರೋಪದ ಮೇಲೆ ಸಹರಾನ್‌ಪುರ ಕೊತ್ವಾಲಿಯಲ್ಲಿ ಪೊಲೀಸರು ಪ್ರತಿಭಟನಾಕಾರರನ್ನು ಥಳಿಸುತ್ತಿರುವುದು ಈ ವೀಡಿಯೊದಲ್ಲಿ ಕಂಡುಬಂದಿದೆ ಎಂದು ಆರೋಪಿಸಲಾಗಿದೆ.

 “ನಾನು ಇನ್ನೂ ವೀಡಿಯೊವನ್ನು ನೋಡಿಲ್ಲ.  ಆದರೆ ಅದು ಸಹರಾನ್‌ಪುರದಲ್ಲಿ ನಡೆದಿರುವುದಲ್ಲ. ಅದು ಎಲ್ಲಿಂದ ಬಂದಿದೆ ಅಥವಾ ಸಂದರ್ಭ ಯಾವುದು ಎಂದು ನನಗೆ ಖಚಿತವಿಲ್ಲ. ನಾವು ಪ್ರಕರಣವನ್ನು ಪರಿಶೀಲಿಸುತ್ತೇವೆ ಹಾಗೂ  ಯಾವುದೇ ಪೊಲೀಸರು ತಪ್ಪಿತಸ್ಥರೆಂದು ಕಂಡುಬಂದರೆ ಕ್ರಮ ತೆಗೆದುಕೊಳ್ಳುತ್ತೇವೆ’’ ಎಂದು ಟ್ವೀಟ್ ವೈರಲ್ ಆದ ನಂತರ ಸಹರಾನ್‌ಪುರ ಎಸ್‌ಎಸ್‌ಪಿ ಆಕಾಶ್ ತೋಮರ್  ಹೇಳಿದ್ದಾರೆ.

ಪ್ರವಾದಿ ಮುಹಮ್ಮದ್ ಅವರ ಕುರಿತು ಆಕ್ಷೇಪಾರ್ಹ ಹೇಳಿಕೆಗಾಗಿ ಅಮಾನತುಗೊಂಡ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ  ಹಾಗೂ ದಿಲ್ಲಿ ಘಟಕದ ಮಾಧ್ಯಮ ಉಸ್ತುವಾರಿ ನವೀನ್ ಜಿಂದಾಲ್ ಅವರನ್ನು ಬಂಧಿಸುವಂತೆ ಒತ್ತಾಯಿಸಿ ಶುಕ್ರವಾರ ಪ್ರತಿಭಟನಾಕಾರರು ಬೀದಿಗಿಳಿದಿದ್ದರು.

ಶುಕ್ರವಾರ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭುಗಿಲೆದ್ದ ಹಿಂಸಾತ್ಮಕ ಪ್ರತಿಭಟನೆಗಳಲ್ಲಿ ಭಾಗಿಯಾಗಿದ್ದ ಪ್ರತಿಭಟನಾಕಾರರನ್ನು ಉತ್ತರಪ್ರದೇಶ ಪೊಲೀಸರು ದಮನಿಸಿದ ಬೆನ್ನಲ್ಲೇ ಅಖಿಲೇಶ್ ಯಾದವ್ ಟ್ವೀಟ್ ಮಾಡಿರುವ ವೀಡಿಯೊ  ವೈರಲ್ ಆಗಿದೆ.

ಶುಕ್ರವಾರದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ 255 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರತಿಭಟನೆಗೆ ಸಂಬಂಧಿಸಿದಂತೆ ಒಟ್ಟು 13 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News