ರಾಷ್ಟ್ರಪತಿ ಚುನಾವಣೆ ಕುರಿತು ಚರ್ಚಿಸಲು 19 ಪ್ರತಿಪಕ್ಷ ನಾಯಕರನ್ನು ಆಹ್ವಾನಿಸಿದ ಮಮತಾ ಬ್ಯಾನರ್ಜಿ

Update: 2022-06-12 14:46 GMT
Photo:PTI

ಹೊಸದಿಲ್ಲಿ, ಜೂ.12: ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಹಾಗೂ ಪ.ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಮುಂಬರುವ ರಾಷ್ಟ್ರಪತಿ ಚುನಾವಣೆಯ ಕುರಿತು ಚರ್ಚಿಸಲು ಜೂ.15ರಂದು ದಿಲ್ಲಿಯಲ್ಲಿ ಆಯೋಜಿಸಿರುವ ಸಭೆಗೆ 19 ರಾಜಕೀಯ ಪಕ್ಷಗಳ ನಾಯಕರನ್ನು ಆಹ್ವಾನಿಸಿದ್ದಾರೆ.

ರಾಷ್ಟ್ರಪತಿ ಚುನಾವಣೆಯು ಜು.18ರಂದು ನಡೆಯಲಿದ್ದು, ಜು.21ರಂದು ಮತಗಳ ಎಣಿಕೆ ನಡೆಯಲಿದೆ.

ರಾಷ್ಟ್ರಪತಿ ಚುನಾವಣೆಯು ಭಾರತೀಯ ರಾಜಕೀಯದ ಭವಿಷ್ಯದ ಪಥದ ಕುರಿತು ಚರ್ಚಿಸಲು ಎಲ್ಲ ಪ್ರಗತಿಪರ ಪ್ರತಿಪಕ್ಷಗಳಿಗೆ ಪರಿಪೂರ್ಣ ಅವಕಾಶವನ್ನು ಒದಗಿಸಿದೆ ಎಂದು ಶನಿವಾರ ಪ್ರತಿಪಕ್ಷ ನಾಯಕರಿಗೆ ಬರೆದಿರುವ ಪತ್ರದಲ್ಲಿ ಹೇಳಿರುವ ಬ್ಯಾನರ್ಜಿ, ‘ನಮ್ಮ ಪ್ರಜಾಪ್ರಭುತ್ವವು ಸಂಕಷ್ಟದ ಸಮಯದಲ್ಲಿರುವಾಗ ವಿರೋಧಿ ಧ್ವನಿಗಳ ಫಲಪ್ರದ ಸಂಗಮವು ಈಗಿನ ಅಗತ್ಯವಾಗಿದೆ ಎಂದು ನಾನು ನಂಬಿದ್ದೇನೆ’ ಎಂದು ತಿಳಿಸಿದ್ದಾರೆ.

ಎಲ್ಲ ಪ್ರಗತಿಪರ ಶಕ್ತಿಗಳು ಒಗ್ಗೂಡಬೇಕು ಮತ್ತು ಭಾರತಕ್ಕೆ ಹಾನಿಯನ್ನುಂಟು ಮಾಡುತ್ತಿರುವ ವಿಭಜಕ ಶಕ್ತಿಯನ್ನು ಪ್ರತಿರೋಧಿಸಬೇಕು ಎಂದು ಹೇಳಿರುವ ಅವರು ಪ್ರವಾದಿ ಮುಹಮ್ಮದ್‌ರ ಕುರಿತು ಬಿಜೆಪಿ ನಾಯಕಿ ನೂಪುರ ಶರ್ಮಾರ ಅವಹೇಳನಕಾರಿ ಹೇಳಿಕೆಗಳಿಗಾಗಿ ಮುಸ್ಲಿಮ್ ಪ್ರಾಬಲ್ಯದ ದೇಶಗಳ ಟೀಕೆಗಳನ್ನು ಉಲ್ಲೇಖಿಸಿ,ಭಾರತದ ವರ್ಚಸ್ಸನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಹಾಳುಗೆಡವಲಾಗುತ್ತಿದೆ ಎಂದಿದ್ದಾರೆ.

ಬ್ಯಾನರ್ಜಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಶಿವಸೇನೆಯ ಉದ್ಧವ ಠಾಕ್ರೆ, ಆಪ್‌ನ ಅರವಿಂದ ಕೇಜ್ರಿವಾಲ್ ಮತ್ತು ಭಗವಂತ ಮಾನ್ ಹಾಗೂ ಸಿಪಿಎಂ ನಾಯಕ ಪಿಣರಾಯಿ ವಿಜಯನ್ ಅವರಿಗೆ ಪತ್ರಗಳನ್ನು ಬರೆದಿದ್ದಾರೆ.

2021ರ ಪ.ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಗೆಲುವಿನ ಬಳಿಕ ದೇಶಾದ್ಯಂತ ತನ್ನ ಹೆಜ್ಜೆ ಗುರುತುಗಳನ್ನು ವಿಸ್ತರಿಸಲು ತೃಣಮೂಲ ಕಾಂಗ್ರೆಸ್‌ನ ಪ್ರಯತ್ನಗಳ ನಡುವೆಯೇ ಬ್ಯಾನರ್ಜಿಯವರು ಪ್ರತಿಪಕ್ಷ ನಾಯಕರಿಗೆ ಪತ್ರ ಬರೆದಿದ್ದಾರೆ.

‘ಪ್ರತಿಪಕ್ಷಗಳ ನಡುವಿನ ಚರ್ಚೆಗಳು ಮುಕ್ತಮನಸ್ಸಿನಿಂದ ಕೂಡಿರುವ ಅಗತ್ಯವಿದೆ ಮತ್ತು ನಮ್ಮ ಭಿನ್ನಾಭಿಪ್ರಾಯಗಳನ್ನು ಮೀರಿ ನಿಲ್ಲಲು ಈಗ ಸಮಯ ಪಕ್ವವಾಗಿದೆ’ ಎಂದು ಹೇಳಿರುವ ಕಾಂಗ್ರೆಸ್, ‘ದೇಶಕ್ಕೆ ರಾಷ್ಟ್ರಪತಿಯಾಗಿ ಆಡಳಿತ ಪಕ್ಷದ ದಾಳಿಗಳಿಂದ ಸಂವಿಧಾನವನ್ನು, ನಮ್ಮ ಸಂಸ್ಥೆಗಳನ್ನು ಮತ್ತು ಪ್ರಜೆಗಳನ್ನು ರಕ್ಷಿಸುವ ವ್ಯಕ್ತಿಯ ಅಗತ್ಯವಿದೆ ಎನ್ನುವುದು ಪಕ್ಷದ ಅಭಿಪ್ರಾಯವಾಗಿದೆ. ಇದು ಈ ಸಮಯದ ಅಗತ್ಯವಾಗಿದೆ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಇತರ ರಾಜಕೀಯ ಪಕ್ಷಗಳೊಂದಿಗೆ ಈ ಚರ್ಚೆಯನ್ನು ಮುಂದಕ್ಕೊಯ್ಯಬೇಕು ಎಂದು ನಾವು ನಂಬಿದೇವೆ’ ಎಂದು ತಿಳಿಸಿದೆ.

ಇಂತಹ ವಿಷಯಗಳ ಕುರಿತು ಸಭೆಗಳನ್ನು ಸಾಮಾನ್ಯವಾಗಿ ಪ್ರತಿಪಕ್ಷಗಳೊಂದಿಗೆ ಸಮಾಲೋಚಿಸಿದ ಬಳಿಕ ನಿರ್ಧರಿಸಲಾಗುತ್ತದೆ. ಸಾಮಾನ್ಯವಾಗಿ ಏಕೈಕ ದೊಡ್ಡ ಪಕ್ಷವು ಮೊದಲ ಹೆಜ್ಜೆಯನಿ್ನಡುತ್ತದೆ ಎಂದು ಹೇಳಿರುವ ಸಿಪಿಎಂ ನಾಯಕ ಸೀತಾರಾಂ ಯೆಚೂರಿಯವರು, ಏಕಪಕ್ಷೀಯ ಪತ್ರವು ರವಾನೆಯಾದಾಗ ಮತ್ತು ಪ್ರಚಾರ ಪಡೆದಾಗ ಇಂತಹ ಸಮಾಲೋಚನೆಗಳು (ಸಭೆಗಾಗಿ) ನಡೆಯುತ್ತಿದ್ದವು ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News