ಪ್ರತಿಭಟನಾಕಾರರ ಮೇಲೆ ಪೊಲೀಸರಿಂದ ಥಳಿತ: ಇದು ‘ಗಲಭೆಕೋರರಿಗೆ ಉಡುಗೊರೆ’ ಎಂದು ಟ್ವೀಟಿಸಿದ ಬಿಜೆಪಿ ಶಾಸಕ

Update: 2022-06-12 10:54 GMT

ಲಕ್ನೋ: ಪೊಲೀಸ್ ಠಾಣೆಯಂತೆ  ಕಂಡುಬಂದಿರುವ ಸ್ಥಳದಲ್ಲಿ ಇಬ್ಬರು ಪೊಲೀಸರು  9 ಜನರ ಮೇಲೆ ಲಾಠಿಯಿಂದ  ಎಡೆಬಿಡದೆ ಥಳಿಸುತ್ತಿರುವುದು, ಪೆಟ್ಟು ತಿಂದವರು  ಹೊಡೆಯದಂತೆ ಬೇಡಿಕೊಳ್ಳುತ್ತಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

ಉತ್ತರ ಪ್ರದೇಶದ ಬಿಜೆಪಿ ಶಾಸಕರೊಬ್ಬರು "ಗಲಭೆಕೋರರಿಗೆ ಉಡುಗೊರೆ" ಎಂಬ ಶೀರ್ಷಿಕೆಯೊಂದಿಗೆ ಟ್ವಿಟರ್‌ನಲ್ಲಿ ಈ  ಘಟನೆಯ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಘಟನೆಯ ವೀಡಿಯೊ ಪೊಲೀಸರ ವಿರುದ್ಧ ಟೀಕೆಗಳನ್ನು ಹುಟ್ಟುಹಾಕಿದೆ ಹಾಗೂ ಪ್ರತಿಪಕ್ಷಗಳು ಪೊಲೀಸ್ ದೌರ್ಜನ್ಯದ ಆರೋಪಗಳನ್ನು ಮಾಡಿವೆ.

ವೀಡಿಯೊ ಹಂಚಿಕೊಂಡಿರುವ ಬಿಜೆಪಿ ಶಾಸಕ ಶಲಭ್ ಮಣಿ ತ್ರಿಪಾಠಿ ಮಾಜಿ ಪತ್ರಕರ್ತನಾಗಿದ್ದು, ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಅವರ ಮಾಧ್ಯಮ ಸಲಹೆಗಾರನಾಗದ್ದಾನೆ.

ಘಟನೆ ಎಲ್ಲಿ ಹಾಗೂ  ಯಾವಾಗ ನಡೆಯಿತು ಎಂಬುದರ ಕುರಿತು ತ್ರಿಪಾಠಿ  ಯಾವುದೇ ವಿವರಗಳನ್ನು ಹಂಚಿಕೊಂಡಿಲ್ಲ.

ಪ್ರವಾದಿ ಮುಹಮ್ಮದ್ ಕುರಿತು ಇಬ್ಬರು ಮಾಜಿ ಬಿಜೆಪಿ ವಕ್ತಾರರು  ನೀಡಿದ್ದ ವಿವಾದಾತ್ಮಕ ಹೇಳಿಕೆಗಳ ಬಗ್ಗೆ ಶುಕ್ರವಾರದ ಪ್ರಾರ್ಥನೆಯ ನಂತರ ಪ್ರತಿಭಟನೆಗಳು ಹಾಗೂ ಘರ್ಷಣೆಗಳು ಭುಗಿಲೆದ್ದಿರುವ ಸಹರಾನ್‌ಪುರದ ಪೊಲೀಸ್ ಠಾಣೆಯಲ್ಲಿ ಎರಡು ದಿನಗಳ ಹಿಂದೆ ಈ ವೀಡಿಯೊವನ್ನು ಚಿತ್ರೀಕರಿಸಲಾಗಿದೆ ಎಂದು ವರದಿಯಾಗಿದೆ.

ಇಂತಹ ಘಟನೆಗಳು ನ್ಯಾಯ ವ್ಯವಸ್ಥೆಯಲ್ಲಿ ಜನರ ನಂಬಿಕೆಗೆ ಧಕ್ಕೆ ತರುತ್ತವೆ ಎಂದು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News