ಈ.ಡಿ. ನಿಯಂತ್ರಣವನ್ನು ಶಿವಸೇನೆಗೆ ನೀಡಿದರೆ ದೇವೇಂದ್ರ ಫಡ್ನವಿಸ್ ಕೂಡ ನಮಗೆ ಮತ ಹಾಕುತ್ತಾರೆ: ಸಂಜಯ್ ರಾವತ್

Update: 2022-06-12 11:31 GMT
ದೇವೇಂದ್ರ ಫಡ್ನವಿಸ್

ಮುಂಬೈ: ಜಾರಿ ನಿರ್ದೇಶನಾಲಯದ (ಈ.ಡಿ.) ನಿಯಂತ್ರಣವನ್ನು ತಮ್ಮ ಪಕ್ಷಕ್ಕೆ ನೀಡಿದರೆ, ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಕೂಡ ಶಿವಸೇನೆಗೆ ಮತ ಹಾಕುತ್ತಾರೆ ಎಂದು ಶಿವಸೇನೆ ಸಂಸದ ಸಂಜಯ್ ರಾವತ್ ರವಿವಾರ ಹೇಳಿದ್ದಾರೆ.

ಶುಕ್ರವಾರ ನಡೆದ ಮಹಾರಾಷ್ಟ್ರದಿಂದ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಶಿವಸೇನೆ ಅಭ್ಯರ್ಥಿ ಸಂಜಯ್ ಪವಾರ್ ಸ್ಥಾನವನ್ನು ಕಳೆದುಕೊಂಡಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಅವರು, "ಈ.ಡಿ. ನಿಯಂತ್ರಣವನ್ನು ಎರಡು ದಿನಗಳ ಕಾಲ ನಮಗೆ ನೀಡಿದರೆ, ದೇವೇಂದ್ರ ಫಡ್ನವಿಸ್ ಕೂಡ ನಮಗೆ ಮತ ಹಾಕುತ್ತಾರೆ" ಎಂದು ಹೇಳಿದ್ದಾರೆ.

ಮಹಾರಾಷ್ಟ್ರದಲ್ಲಿ ಬಿಜೆಪಿಯಿಂದ ಕೇಂದ್ರ ಸಚಿವ ಪೀಯೂಷ್‌ ಗೋಯಲ್‌, ಮಾಜಿ ಸಚಿವ ಅನಿಲ್‌ ಬೊಂಡೆ, ಧನಂಜಯ ಮಹದಿಕ್‌ ಚುನಾಯಿತರಾಗಿದ್ದರೆ, ಮಹಾ ವಿಕಾಸ ಅಘಾಡಿ ಮೈತ್ರಿಕೂಟದಿಂದ ಶಿವಸೇನೆಯ ಸಂಜಯ ರಾವುತ್‌, ಎನ್‌ಸಿಪಿಯ ಪ್ರಫುಲ್‌ ಪಟೇಲ್‌, ಕಾಂಗ್ರೆಸ್ಸಿನ ಇಮ್ರಾನ್‌ ಪ್ರತಾಪ್‌ಗಢಿ ಅವರು ಆಯ್ಕೆಯಾಗಿದ್ದಾರೆ. ಆರನೇ ಸ್ಥಾನಕ್ಕೆ ಎನ್‌ಸಿಪಿಯಿಂದ ಸಂಜಯ್‌ ಪವಾರ್‌ ಹಾಗೂ ಬಿಜೆಪಿಯಿಂದ ಮಹದಿಕ್‌ ಅವರು ಸ್ಪರ್ಧಿಸಿದ್ದರು. ಪಕ್ಷೇತರರ ಬೆಂಬಲವನ್ನು ಬಿಜೆಪಿ ಯಶಸ್ವಿಯಾಗಿದ್ದರಿಂದ ಧನಂಜಯ ಮಹದಿಕ್‌ ಗೆಲುವು ಸಾಧಿಸಿದ್ದರು.   

ಇದು ರಾಜ್ಯದಲ್ಲಿ ಆಡಳಿತಾರೂಢ ಶಿವಸೇನೆ ಮತ್ತು ವಿರೋಧ ಪಕ್ಷ ಬಿಜೆಪಿ ನಡುವಿನ ಪ್ರತಿಷ್ಠೆಯ ಹೋರಾಟವಾಗಿದ್ದರಿಂದ ಶಿವಸೇನೆಗೆ ತೀವ್ರ ಮುಜುಗರವಾಗಿದೆ. 

ಬಿಜೆಪಿ ಅಭ್ಯರ್ಥಿಗಳ ಪರವಾಗಿ ಮತ ಹಾಕುವಂತೆ ಸ್ವತಂತ್ರ ಮತ್ತು ಸಣ್ಣ ಪಕ್ಷಗಳ ಮೇಲೆ ಒತ್ತಡ ಹೇರಲು ಬಿಜೆಪಿ ಕೇಂದ್ರೀಯ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿದೆ ಎಂದು ರಾವತ್ ಅವರು ಚುನಾವಣೆಗೆ ಮುನ್ನವೇ ಆರೋಪಿಸಿದ್ದರು. 

ಶಿವಸೇನೆಗೆ ಬೆಂಬಲ ನೀಡುವುದಾಗಿ ವಾಗ್ದಾನ ಮಾಡಿದ್ದ ಸ್ವತಂತ್ರ ಅಭ್ಯರ್ಥಿಗಳು ಮತ್ತು ಸಣ್ಣ ಪಕ್ಷಗಳು ಬಿಜೆಪಿಯ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News