ಬಿಎಸ್‌ಎಫ್ ಅಧಿಕಾರ ವ್ಯಾಪ್ತಿಯ ವಿಸ್ತರಣೆ, ಲಾಜಿಸ್ಟಿಕ್ ಅಗತ್ಯಗಳಿಗಾಗಿ ನೀಲನಕ್ಷೆ ಸಿದ್ಧ

Update: 2022-06-12 17:04 GMT

ಹೊಸದಿಲ್ಲಿ, ಜೂ.12: ವಿವಿಧ ಗಡಿರಾಜ್ಯಗಳಲ್ಲಿ ಗಡಿ ಭದ್ರತಾ ಪಡೆ (ಬಿಎಸ್‌ಎಫ್)ಯ ವಿಸ್ತರಿತ ಅಧಿಕಾರ ವ್ಯಾಪ್ತಿ ಮತ್ತು ಅದರ ಹೊಸ ಲಾಜಿಸ್ಟಿಕ್ ಅಗತ್ಯಗಳನ್ನು ವ್ಯಾಖ್ಯಾನಿಸುವ ನೀಲನಕ್ಷೆಯು ಸಿದ್ಧಗೊಂಡಿದ್ದು, ಶೀಘ್ರವೇ ಕೇಂದ್ರ ಗೃಹ ಸಚಿವಾಲಯಕ್ಕೆ ಸಲ್ಲಿಕೆಯಾಗುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಿಎಸ್‌ಎಫ್ ಪಶ್ಚಿಮದಲ್ಲಿ ಪಾಕಿಸ್ತಾನದೊಂದಿಗಿನ ಮತ್ತು ಪೂರ್ವದಲ್ಲಿ ಬಾಂಗ್ಲಾದೇಶದ ಜೊತೆಗಿನ ಒಟ್ಟು 6,300 ಕಿ.ಮೀ.ಉದ್ದದ ಭಾರತೀಯ ಗಡಿಗಳನ್ನು ರಕ್ಷಿಸುತ್ತಿದೆ.

ಅಕ್ಟೋಬರ್ 2021ರಲ್ಲಿ ಅಧಿಸೂಚನೆಯೊಂದನ್ನು ಹೊರಡಿಸಿದ್ದ ಕೇಂದ್ರ ಸರಕಾರವು ಪಂಜಾಬ್, ಪ.ಬಂಗಾಳ ಮತ್ತು ಅಸ್ಸಾಮ್‌ಗಳಲ್ಲಿ ಬಿಎಸ್‌ಎಫ್ ಅಧಿಕಾರ ವ್ಯಾಪ್ತಿಯನ್ನು ಗಡಿಯಿಂದ ಒಳನಾಡಿನತ್ತ ಮೊದಲಿನ 15 ಕಿ.ಮೀ.ಗಳಿಂದ 50 ಕಿ.ಮೀ.ಗೆ ಹೆಚ್ಚಿಸಿತ್ತು. ಗುಜರಾತಿನಲ್ಲಿ ಈ ವ್ಯಾಪ್ತಿಯನ್ನು 80 ಕಿ.ಮೀ.ಗಳಿಂದ 50 ಕಿ.ಮೀ.ಗೆ ತಗ್ಗಿಸಿದ್ದರೆ ರಾಜಸ್ಥಾನದಲ್ಲಿ 50 ಕಿ.ಮೀ.ಗಳ ಯಥಾಸ್ಥಿತಿಯನ್ನು ಕಾಯ್ದುಕೊಳ್ಳಲಾಗಿತ್ತು.

ಅಧಿಸೂಚನೆಗೆ ಅನುಗುಣವಾಗಿ ತನ್ನ 50 ಕಿ.ಮೀ.ವ್ಯಾಪ್ತಿಯನ್ನು ಗುರುತಿಸಲು ಬಿಎಸ್‌ಎಫ್ ತನ್ನ ಇತರ ಸೋದರ ಪಡೆಗಳೊಂದಿಗೆ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿತ್ತು. ಇದು ಸರಕಾರದ ನೂತನ ಆದೇಶದ ಹಂತ ಹಂತವಾಗಿ ಅನುಷ್ಠಾನದ ಭಾಗವಾಗಿತ್ತು.

ಗಡಿಯಾಚೆಯ ಅಪರಾಧಗಳ ವಿರುದ್ಧ ಕಾರ್ಯಾಚರಿಸುವ ಪಡೆಗಳಿಗಾಗಿ ಕೆಲವು ನಿಲುಗಡೆ ತಾಣಗಳು,ಮುಂಚೂಣಿ ಠಾಣೆಗಳು ಮತ್ತು ಇತರ ಲಾಜಿಸ್ಟಿಕ್ಸ್ ಅಗತ್ಯಗಳನ್ನು ಗುರುತಿಸಲಾಗಿದೆ ಹಾಗೂ ಸೂಕ್ತ ಸಮಯದಲ್ಲಿ ಅನುಮೋದನೆಗಾಗಿ ನೀಲನಕ್ಷೆಯನ್ನು ಗೃಹ ಸಚಿವಾಲಯಕ್ಕೆ ಸಲ್ಲಿಸಲಾಗುವದು. ಅನುಮೋದನೆಯ ಬಳಿಕ ಹೊಸ ಸಂವಹನ,ಲಾಜಿಸ್ಟಿಕ್ಸ್ ಅವಶ್ಯಕತೆಗಳು ಮತ್ತು ಅಗತ್ಯವಾದರೆ ಯೋಧರ ಹುದ್ದೆಗಳನ್ನು ಕ್ರಮೇಣ ಸೃಷ್ಟಿಸಲಾಗುವದು ಎಂದು ಅಧಿಕಾರಿಗಳು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News