ಡೈನೊಸಾರ್‌ನ ಹೊಸ ಪ್ರಬೇಧದ ಕುರುಹು ಪತ್ತೆ

Update: 2022-06-12 18:00 GMT

ಟೋಕಿಯೊ, ಜೂ.12: ಚಾಕುವಿನಂತಹ ಉಗುರುಗಳನ್ನು ಹೊಂದಿದ್ದ ಎರಡು ಕಾಲಿನ ಡೈನೋಸಾರ್‌ಗಳು ಸುಮಾರು 145 ಮಿಲಿಯನ್ ವರ್ಷಗಳ ಹಿಂದೆ ಏಶ್ಯಾದ ತೀರಗಳಲ್ಲಿ ಅಲೆದಾಡುತ್ತಿದ್ದವು ಎಂದು ಇತ್ತೀಚೆಗೆ ನಡೆಸಿದ ಅಧ್ಯಯನದಲ್ಲಿ ತಿಳಿದುಬಂದಿದೆ.

ಜಪಾನ್‌ನ ಉತ್ತರದ ಹೊಕಾಯ್ಡೊ ದ್ವೀಪದಲ್ಲಿ ನಡೆಸಿದ ಉತ್ಖನನದ ಸಂದರ್ಭ ಕ್ರಿಟೇಷಿಯಸ್ ಯುಗದ ಡೈನೊಸಾರ್‌ಗಳ ಪಳೆಯುಳಿಕೆಯ ಅವಶೇಷ ಪತ್ತೆಯಾಗಿದೆ. ಈ ಡೈನೊಸಾರ್‌ಗಳ ಕಾಲಿನ ಉಗುರುಗಳು ಚೂರಿಯನ್ನು ಹೋಲುತ್ತಿದ್ದವು ಎಂದು ಅಮೆರಿಕ ಮತ್ತು ಜಪಾನ್‌ನ ಸಂಶೋಧಕರ ತಂಡ ಹೇಳಿದೆ.

ಕಾಲುಗಳಲ್ಲಿ ಮೂರು ಬೆರಳುಗಳಿದ್ದ ಈ ಡೈನೊಸಾರ್‌ಗಳು ಪ್ರಾಥಮಿಕವಾಗಿ ಸಸ್ಯಾಹಾರಿಗಳಾಗಿದ್ದವು ಎಂದಿರುವ ಸಂಶೋಧಕರು, ಈ ಹೊಸ ಪ್ರಬೇಧಕ್ಕೆ `ಪರಲಿಥೆರಿಝಿನೊಸಾರಸ್’ ಎಂದು ಹೆಸರಿಟ್ಟಿದ್ದಾರೆ.  ಇವುಗಳ ವಿಶೇಷತೆಯೆಂದರೆ ಖಡ್ಗ, ಚೂರಿಯನ್ನು ಹೋಲುವ ಉಗುರುಗಳು. ಇವನ್ನು ಪ್ರಾಣಿಗಳ ಬೇಟೆಯ ಬದಲು  ಸಸ್ಯಾಹಾರ ಕತ್ತರಿಸಲು, ನೆಲದಡಿಯಿಂದ ಬಗೆದು ತೆಗೆಯಲು, ಮರದ ಎಲೆಗಳನ್ನು ಬಗ್ಗಿಸಲು ಹೆಚ್ಚಾಗಿ ಬಳಸುತ್ತಿದ್ದವು . ಇವು ಸುಮಾರು 30 ಅಡಿ ಉದ್ದ, 3 ಟನ್ ತೂಕವಿದ್ದವು ಎಂದು ಸಂಶೋಧಕರ ತಂಡದಲ್ಲಿದ್ದ ಅಮೆರಿಕದ ಸದರ್ನ್ ಮೆಥೊಡಿಸ್ಟ್ ವಿವಿಯ ಪ್ರೊಫೆಸರ್ ರಾಯ್ ಎಂ ಹಫಿಂಗ್ಟನ್ ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News