ಇಸ್ರೇಲ್ ದಾಳಿಯಿಂದ ದಮಾಸ್ಕಸ್ ವಿಮಾನ ನಿಲ್ದಾಣಕ್ಕೆ ಭಾರೀ ಹಾನಿ: ಸಿರಿಯಾ

Update: 2022-06-12 18:09 GMT
ಸಾಂದರ್ಭಿಕ ಚಿತ್ರ

ದಮಾಸ್ಕಸ್, ಜೂ.12: ಶುಕ್ರವಾರ ಇಸ್ರೇಲ್ ನಡೆಸಿದ ದಾಳಿಯಿಂದ ದಮಾಸ್ಕಸ್‌ನ ವಿಮಾನ ನಿಲ್ದಾಣಕ್ಕೆ ಭಾರೀ ಹಾನಿಯಾಗಿದೆ. ವಿಮಾನದ ರನ್‌ವೇ ಕಾರ್ಯ ನಿರ್ವಹಿಸದ ಸ್ಥಿತಿಯಲ್ಲಿದೆ ಎಂದು ಸಿರಿಯಾದ ಸಾರಿಗೆ ಸಚಿವಾಲಯ ಶನಿವಾರ ಹೇಳಿದೆ.

ಶುಕ್ರವಾರ ಇಸ್ರೇಲ್ ಆಕ್ರಮಿತ ಗೋಲನ್‌ಹೈಟ್ಸ್ನಿಂದ ದಮಾಸ್ಕಸ್ ವಿಮಾನ ನಿಲ್ದಾಣವನ್ನು ಗುರಿಯಾಗಿಸಿ ನಡೆದ ಸರಣಿ ಕ್ಷಿಪಣಿ ದಾಳಿಯಲ್ಲಿ ವಿಮಾನ ನಿಲ್ದಾಣಕ್ಕೆ ಭಾರೀ ಹಾನಿಯಾಗಿದೆ. ಆದ್ದರಿಂದ ಶನಿವಾರ ವಿಮಾನ ನಿಲ್ದಾಣದಿಂದ ಹೊರಡುವ ಮತ್ತು ಆಗಮಿಸುವ ಎಲ್ಲಾ ವಿಮಾನಗಳ ಸೇವೆಯನ್ನು ಅಮಾನತುಗೊಳಿಸಲಾಗಿದೆ. ವಿಮಾನ ನಿಲ್ದಾಣದ ರನ್‌ವೇ, ಲಾಂಜ್‌ಗೆ, ಟರ್ಮಿನಲ್ ಕಟ್ಟಡಕ್ಕೆ ವ್ಯಾಪಕ ಹಾನಿಯಾಗಿದೆ.

ವಿಮಾನ ನಿಲ್ದಾಣಕ್ಕೆ ಆಗಿರುವ ಹಾನಿಯನ್ನು ಸರಿಪಡಿಸಲು ನಾಗರಿಕ ವಿಮಾನಯಾನ ಮತ್ತು ರಾಷ್ಟ್ರೀಯ ಕಂಪೆನಿಗಳು ಕೆಲಸ ಮಾಡುತ್ತಿವೆ.  ದುರಸ್ತಿ ಕಾರ್ಯ ಪೂರ್ಣಗೊಂಡ ತಕ್ಷಣ ವಿಮಾನಯಾನ ಸಂಸ್ಥೆಗಳ ಸಹಕಾರದಿಂದ ವಿಮಾನ ಸಂಚಾರ ಪುನರಾರಂಭ ಆಗಲಿದೆ ಎಂದು ಸಚಿವಾಲಯದ ಹೇಳಿಕೆಯನ್ನು ಉಲ್ಲೇಖಿಸಿದ ಸರಕಾರಿ ಸ್ವಾಮ್ಯದ ಸುದ್ಧಿಸಂಸ್ಥೆ ಸನಾ ವರದಿ ಮಾಡಿದೆ.

ಸಿರಿಯಾದಲ್ಲಿ 2011ರಲ್ಲಿ ಯುದ್ಧ ಆರಂಭಗೊಂಡಂದಿನಿಂದ ಸಿರಿಯಾದ ಸರಕಾರಿ ಪಡೆ ಹಾಗೂ ಇರಾನ್ ಬೆಂಬಲಿತ ಹಝ್‌ಬೊಲ್ಲ ಸಂಘಟನೆಯನ್ನು ಗುರಿಯಾಗಿಸಿ ಇಸ್ರೇಲ್ ನಿರಂತರ ವಾಯುದಾಳಿ ನಡೆಸುತ್ತಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News