ಬಲವಂತದ ಸ್ಥಳಾಂತರದ ಅಪಾಯದಲ್ಲಿ ಸಾವಿರಾರು ಫೆಲೆಸ್ತೀನ್ ಪ್ರಜೆಗಳು

Update: 2022-06-12 18:18 GMT

ಜೆರುಸಲೇಂ, ಜೂ.12: ಇಸ್ರೇಲ್-ಪಶ್ಚಿಮ ದಂಡೆ ಗಡಿಭಾಗಕ್ಕೆ ಹೊಂದಿಕೊಂಡಿರುವ 7,400 ಎಕರೆ ಪ್ರದೇಶವನ್ನು `ಮಿಲಿಟರಿ ತರಬೇತಿ ವಲಯ’ ಎಂದು ಘೋಷಿಸಿರುವ ಇಸ್ರೇಲ್ ಸರಕಾರದ ಕ್ರಮವನ್ನು ಇಸ್ರೇಲ್‌ನ ಸುಪ್ರೀಂಕೋರ್ಟ್ ಎತ್ತಿಹಿಡಿದಿರುವ ಹಿನ್ನೆಲೆಯಲ್ಲಿ, ಈ ಪ್ರದೇಶದಲ್ಲಿ ನೆಲೆಸಿರುವ ಸುಮಾರು 1,200 ಫೆಲೆಸ್ತೀನೀಯರು ಈಗ ಬಲವಂತದ ಸ್ಥಳಾಂತರದ ಭೀತಿಯಲ್ಲಿದ್ದಾರೆ ಎಂದು ವರದಿಯಾಗಿದೆ.

ಆಕ್ರಮಿತ ಪಶ್ಚಿಮ ದಂಡೆಯ ಮಸಫೆರ್ ಯಾತ್ತಾ ಪ್ರದೇಶದ ಸ್ವಾಧೀನಕ್ಕೆ ಸಂಬಂಧಿಸಿದ ದಶಕಗಳಿಂದ ಮುಂದುವರಿದಿದ್ದ ಕಾನೂನು ಹೋರಾಟ ಕಳೆದ ತಿಂಗಳು ಅಂತ್ಯಗೊಂಡಿತ್ತು. 1980ರಲ್ಲಿ ಈ ಪ್ರದೇಶವನ್ನು ಸೇನೆಯ ತರಬೇತಿಗೆ ಅತ್ಯಂತ ಅಗತ್ಯದ ಪ್ರದೇಶವೆಂದು ಗುರುತಿಸಿದ್ದ ಇಸ್ರೇಲ್, ಇದನ್ನು ತರಬೇತಿ ವಲಯ ಎಂದು ಘೋಷಿಸಿತ್ತು ಮತ್ತು ಇಲ್ಲಿ ನೆಲೆಸಿರುವ ಫೆಲೆಸ್ತೀನೀಯರು ಕಾಯಂ ನಿವಾಸಿಗಳಲ್ಲ ಎಂದು ಹೇಳಿತ್ತು.

ಆದರೆ ಇದನ್ನು ನಿರಾಕರಿಸಿದ್ದ ಫೆಲೆಸ್ತೀನೀಯರು, ಇದು ತಲೆತಲಾಂತರದಿAದ ತಮಗೆ ಸೇರಿದ್ದ ಭೂಮಿಯಾಗಿದ್ದು ಇದನ್ನು ಬಿಟ್ಟುಕೊಡುವುದಿಲ್ಲ ಎಂದು ಹೇಳಿದ್ದರು. ನ್ಯಾಯಾಲಯದಲ್ಲಿ ದಶಕಗಳ ಕಾಲ ನಡೆದ ಕಲಾಪದಲ್ಲಿ ಜಮೀನಿನ  ಒಡೆತನಕ್ಕೆ ಸಂಬಂಧಿಸಿದ ಪುರಾವೆಗಳನ್ನು ಒದಗಿಸಲು ಫೆಲೆಸ್ತೀನೀಯರು ವಿಫಲವಾಗಿರುವುದರಿಂದ ಇಸ್ರೇಲ್‌ನ ಹೇಳಿಕೆಯನ್ನು ಎತ್ತಿ ಹಿಡಿಯಲಾಗಿದೆ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ.

ಈ ಪ್ರದೇಶದ ನಿವಾಸಿಗಳು ಸಾಂಪ್ರದಾಯಿಕವಾಗಿ ನೆಲದಡಿಯ ಗುಹೆಯಲ್ಲಿ ನೆಲೆಸುತ್ತಿದ್ದರು. ಕಳೆದ 2 ದಶಕಗಳಿಂದ ಅವರೂ ನೆಲದ ಮೇಲೆ ಶೀಟ್‌ನ ಮನೆ ಹಾಗೂ ಸಣ್ಣ ಕೋಣೆ ನಿರ್ಮಿಸಿ ನೆಲೆಸುತ್ತಿದ್ದಾರೆ. ಇವು ಅಕ್ರಮ ನಿರ್ಮಾಣ ಎಂದು ಪ್ರತಿಪಾದಿಸುತ್ತಿರುವ ಇಸ್ರೇಲ್ ಈ ನಿರ್ಮಾಣಗಳನ್ನು ನೆಲಸಮಗೊಳಿಸುತ್ತಾ ಬಂದಿದೆ.

ಇದೀಗ ನ್ಯಾಯಾಲಯದ ತೀರ್ಪೂ ಅವರ ಪರವಾಗಿ ಬಂದಿರುವುದರಿಂದ ನೆಲಸಮ ಕಾರ್ಯಾಚರಣೆ ಇನ್ನಷ್ಟು ತೀವ್ರಗೊಳ್ಳಬಹುದು. ಅಂತರಾಷ್ಟ್ರೀಯ ಸಮುದಾಯ ಒತ್ತಡ ಹೇರಿದರೆ ಇಸ್ರೇಲ್ ಹಿಂಜರಿಯಬಹುದು ಎಂದು ಸ್ಥಳೀಯ ಫೆಲೆಸ್ತೀನೀಯರು ಹೇಳುತ್ತಿದ್ದಾರೆ.

ಸ್ಥಳೀಯ ಫೆಲೆಸ್ತೀನ್ ಜನರ ಕುರಿತು `ಲೈಫ್ ಇನ್ ದಿ ಕೇವ್ಸ್ ಆಫ್ ಮೌಂಟ್ ಹೆಬ್ರಾನ್’ ಎಂಬ ಪುಸ್ತಕ ಬರೆದಿರುವ ಇಸ್ರೇಲ್ ಸಾಹಿತಿ ಯಾಕೋವ್ ಹವಕುಕ್, ತಾನು ಸ್ಥಳೀಯರ ಪರವಾಗಿ ನ್ಯಾಯಾಲಯದಲ್ಲಿ ಹೇಳಿಕೆ ನೀಡಲು ಮುಂದಾದಾಗ ಇಸ್ರೇಲ್ ಸೇನೆ ತನ್ನನ್ನು ತಡೆದಿದೆ ಎಂದಿದ್ದಾರೆ. ನ್ಯಾಯಾಲಯದ ತೀರ್ಪನ್ನು ವಿಶ್ವಸಂಸ್ಥೆ ಮತ್ತು ಯುರೋಪಿಯನ್ ಯೂನಿಯನ್ ಖಂಡಿಸಿದ್ದು, ಕಟ್ಟಡ ನೆಲಸಮಗೊಳಿಸುವ ಮತ್ತು ಪೆಲೆಸ್ತೀನೀಯರನ್ನು ಬಲವಂತದಿಂದ ಸ್ಥಳಾಂತರಿಸುವ ಕಾರ್ಯಾಚರಣೆ ಸ್ಥಗಿತಗೊಳಿಸುವಂತೆ ಇಸ್ರೇಲ್ ಅನ್ನು ಆಗ್ರಹಿಸಿದೆ. ಆಕ್ರಮಿತ ಪ್ರದೇಶದಲ್ಲಿರುವ ಜನರನ್ನು ತರಬೇತಿ ವಲಯ ಸ್ಥಾಪನೆಯ ಕಾರಣಕ್ಕೆ ಸ್ಥಳಾಂತರಿಸುವುದು ಅತ್ಯಗತ್ಯದ ಮಿಲಿಟರಿ ಕಾರಣ ಎಂದು ಪರಿಗಣಿಸಲಾಗದು ಎಂದು ಯುರೋಪಿಯನ್ ಯೂನಿಯನ್ ವಕ್ತಾರೆ ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News