ಎರಡನೇ ಟೆಸ್ಟ್: ಶತಕ ಸಿಡಿಸಿ ವಿರಾಟ್ ಕೊಹ್ಲಿ , ಸ್ಟೀವ್ ಸ್ಮಿತ್‌ ದಾಖಲೆ ಸರಿಗಟ್ಟಿದ ಜೋ ರೂಟ್

Update: 2022-06-13 05:06 GMT
Photo: PTI

ಟ್ರೆಂಟ್ ಬ್ರಿಡ್ಜ್‌:  ನ್ಯೂಝಿಲ್ಯಾಂಡ್  ವಿರುದ್ಧದ ಎರಡನೇ ಟೆಸ್ಟ್‌ನ ಮೂರನೇ ದಿನದಂದು ಜೋ ರೂಟ್ ತಮ್ಮ ಭರ್ಜರಿ ಪ್ರದರ್ಶನವನ್ನು  ಮುಂದುವರಿಸಿ  ಮತ್ತೊಮ್ಮೆ ಶತಕವನ್ನು ಗಳಿಸಿದರು.

ಈ ವರ್ಷದ ಆರಂಭದಲ್ಲಿ ಬೆನ್ ಸ್ಟೋಕ್ಸ್‌ಗೆ ಇಂಗ್ಲೆಂಡ್ ನಾಯಕತ್ವವನ್ನು ಹಸ್ತಾಂತರಿಸಿದ ಬಳಿಕ ನಿರಾಳರಾಗಿರುವ  ರೂಟ್ ಅವರು ತಮ್ಮ 27 ನೇ ಟೆಸ್ಟ್ ಶತಕ ಪೂರೈಸಿದರು.

ರೂಟ್ ಈಗ ಸಕ್ರಿಯ ಕ್ರಿಕೆಟಿಗರಲ್ಲಿ ಟೆಸ್ಟ್ ಪಂದ್ಯದಲ್ಲಿ ಅತ್ಯಂತ ಹೆಚ್ಚು ಶತಕಗಳನ್ನು ಸಿಡಿಸಿದ ದಾಖಲೆಯನ್ನು ಸರಿಗಟ್ಟಿದ್ದಾರೆ. ಭಾರತದ ವಿರಾಟ್ ಕೊಹ್ಲಿ ಹಾಗೂ  ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ 27 ಟೆಸ್ಟ್ ಶತಕಗಳನ್ನು ಗಳಿಸಿದ ಇತರ ಇಬ್ಬರು ಸಕ್ರಿಯ ಆಟಗಾರರಾಗಿದ್ದಾರೆ.

ಕೊಹ್ಲಿ ನವೆಂಬರ್ 2019 ರಿಂದ ಟೆಸ್ಟ್ ಶತಕವನ್ನು ಗಳಿಸಿಲ್ಲ.  ಆದರೆ ಸ್ಮಿತ್ ಜನವರಿ 2021 ರಿಂದ ಮೂರಂಕೆಯನ್ನು  ತಲುಪಿಲ್ಲ.

ಮತ್ತೊಂದೆಡೆ ರೂಟ್ ಕಳೆದ ಒಂದೂವರೆ ವರ್ಷಗಳಲ್ಲಿ 10 ಶತಕಗಳನ್ನು ಬಾರಿಸಿದ್ದಾರೆ.

ರೂಟ್ ಗೆ ತಮ್ಮ ವೇಗದ ಟೆಸ್ಟ್ ಶತಕವನ್ನು ತಲುಪಲು ಕೇವಲ 116 ಎಸೆತಗಳು ಬೇಕಾಯಿತು.  ಲಾರ್ಡ್ಸ್‌ನಲ್ಲಿನ ಪ್ರದರ್ಶನವನ್ನು ಮುಂದುವರಿಸಿದ ರೂಟ್  ಸತತ ಎರಡನೇ ಶತಕ ಸಿಡಿಸಿದರು.

ಮೊದಲ ಟೆಸ್ಟ್ ನಲ್ಲಿ   ಔಟಾಗದೆ 115 ರನ್ ಗಳಿಸಿದ್ದ ರೂಟ್ ಇಂಗ್ಲೆಂಡ್ ಮೂರು ಪಂದ್ಯಗಳ ಸರಣಿಯ ಆರಂಭಿಕ ಪಂದ್ಯದಲ್ಲಿ ಟೆಸ್ಟ್ ವಿಶ್ವ ಚಾಂಪಿಯನ್‌ಗಳ ವಿರುದ್ಧ ಐದು ವಿಕೆಟ್‌ಗಳ ರೋಚಕ ವಿಜಯಕ್ಕೆ ಕಾರಣವಾದರು..

ಎರಡನೇ ಟೆಸ್ಟ್ ನಲ್ಲಿ ನ್ಯೂಝಿಲ್ಯಾಂಡ್‌ನ ಮೊದಲ ಇನ್ನಿಂಗ್ಸ್‌ನ 553 ಸ್ಕೋರ್‌ಗೆ ಪ್ರತ್ಯುತ್ತರ ನೀಡಿದ  ಇಂಗ್ಲೆಂಡ್ ಪರ ಓಲಿ  ಪೋಪ್  ಹಾಗೂ  ರೂಟ್ ಶತಕ ಸಿಡಿಸಿ ತಂಡವನ್ನು ಆಧರಿಸಿದರು.  ಪೋಪ್ ಅವರ ಎರಡನೇ ಟೆಸ್ಟ್ ಶತಕ (239 ಎಸೆತಗಳಲ್ಲಿ 145 ರನ್ ) ಹಾಗೂ ಇಂಗ್ಲೆಂಡ್ ನೆಲದಲ್ಲಿ ಮೊದಲನೆಯ ಶತಕ ಸಿಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News