×
Ad

ಯುದ್ಧದ ಅವಧಿಯಲ್ಲಿ ತೈಲ ರಫ್ತಿನಿಂದ 98 ಬಿಲಿಯನ್ ಡಾಲರ್ ಆದಾಯ ಗಳಿಸಿದ ರಶ್ಯ

Update: 2022-06-13 23:48 IST

ಪ್ಯಾರಿಸ್, ಜೂ.13: ಉಕ್ರೇನ್‌ನಲ್ಲಿನ ಯುದ್ಧದ ಆರಂಭವಾದ 100 ದಿನಗಳಲ್ಲಿ ರಶ್ಯವು ಪಳೆಯುಳಿಕೆಯ ಇಂಧನ ರಫ್ತಿನಿಂದ 98 ಬಿಲಿಯನ್ ಡಾಲರ್‌ನಷ್ಟು ಆದಾಯ ಗಳಿಸಿದ್ದು ಇದರಲ್ಲಿ ಬಹುತೇಕ ತೈಲ ಯುರೋಪಿಯನ್ ಯೂನಿಯನ್‌ಗೆ ರಫ್ತಾಗಿದೆ ಎಂದು ಸೋಮವಾರ ಪ್ರಕಟವಾದ ವರದಿ ಹೇಳಿದೆ.

ರಶ್ಯ ಗಳಿಸಿದ 89 ಮಿಲಿಯನ್ ಡಾಲರ್ ಮೊತ್ತದಲ್ಲಿ ಯುರೋಪಿಯನ್ ಯೂನಿಯನ್‌ನ ಪಾಲು ಸುಮಾರು 60 ಬಿಲಿಯನ್ ಡಾಲರ್ (61%) ಆಗಿದೆ. ಉಳಿದಂತೆ ಚೀನಾ 13.48 ಬಿಲಿಯನ್ ಡಾಲರ್, ಜರ್ಮನಿ 12.94 ಬಿಲಿಯನ್ ಡಾಲರ್, ಇಟಲಿ 8.16 ಬಿಲಿಯನ್ ಡಾಲರ್ ಮೌಲ್ಯದ ತೈಲವನ್ನು ರಶ್ಯದಿಂದ ಆಮದು ಮಾಡಿಕೊಂಡಿದೆ ಎಂದು ವರದಿ ಹೇಳಿದೆ. ಕಚ್ಛಾ ತೈಲದ ರಫ್ತಿನಿಂದ 46 ಬಿಲಿಯನ್ ಡಾಲರ್ ಗಳಿಸಿದ್ದರೆ ಉಳಿದ ಆದಾಯ ಪೈಪ್‌ಲೈನ್ ಗ್ಯಾಸ್, ತೈಲೋತ್ಪನ್ನಗಳು, ಎಲ್‌ಎನ್‌ಜಿ ಮತ್ತು ಕಲ್ಲಿದ್ದಲು ರಫ್ತಿನಿಂದ ಸಂಗ್ರಹವಾಗಿದೆ.

 ಮೇ ತಿಂಗಳಿನಲ್ಲಿ ರಶ್ಯದ ರಫ್ತಿಗೆ ತುಸು ಹಿನ್ನಡೆಯಾದರೂ ಪಳೆಯುಳಿಕೆ ಇಂಧನದ ಜಾಗತಿಕ ದರ ಗಗನಕ್ಕೇರಿದ್ದು ರಶ್ಯಕ್ಕೆ ವರದಾನವಾಗಿದ್ದು ರಫ್ತು ಆದಾಯ ದಾಖಲೆ ಮಟ್ಟಕ್ಕೇರಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ರಶ್ಯದ ಸರಾಸರಿ ರಫ್ತು ದರ 60% ಏರಿಕೆಯಾಗಿದೆ. ಚೀನಾ, ಭಾರತ, ಯುಎಇ ಮತ್ತು ಫ್ರಾನ್ಸ್ ಸೇರಿದಂತೆ ಕೆಲವು ದೇಶಗಳು ರಶ್ಯದಿಂದ ಖರೀದಿ ಹೆಚ್ಚಿಸಿವೆ. ಅಲ್ಲದೆ ಇದರಲ್ಲಿ ಬಹುತೇಕ ಖರೀದಿ ಪ್ರಕ್ರಿಯೆ ತಕ್ಷಣ ಹಣ ಪಾವತಿಸಿ ನಡೆದಿದೆ ಎಂದು ವರದಿ ಹೇಳಿದೆ.

ರಶ್ಯದೊಂದಿಗಿನ ಎಲ್ಲಾ ವ್ಯವಹಾರಗಳನ್ನೂ ರದ್ದುಗೊಳಿಸಿದರೆ ಮಾತ್ರ ಆ ದೇಶದ ಆದಾಯ ಮೂಲಕ್ಕೆ ಧಕ್ಕೆಯಾಗಲಿದೆ ಎಂದು ಉಕ್ರೇನ್ ಹಲವು ಬಾರಿ ಆಗ್ರಹಿಸಿರುವಂತೆಯೇ ಫಿನ್ಲ್ಯಾಂಡ್ ಮೂಲದ ‘ಸೆಂಟರ್ ಫಾರ್ ರಿಸರ್ಚ್ ಆನ್ ಎನರ್ಜಿ ಆ್ಯಂಡ್ ಕ್ಲೀನ್ ಏರ್(ಸಿಆರ್‌ಇಎ)’ ಈ ವರದಿ ಬಿಡುಗಡೆಗೊಳಿಸಿದೆ. ರಶ್ಯದಿಂದ ಆಮದಾಗುವ ತೈಲವನ್ನೇ ಬಹುತೇಕ ಅವಲಂಬಿಸಿರುವ ಯುರೋಪಿಯನ್ ಯೂನಿಯನ್ ಈ ತಿಂಗಳ ಆರಂಭದಲ್ಲಿ ತೈಲ ಆಮದನ್ನು ಕಡಿಮೆಗೊಳಿಸುವುದಾಗಿ ಘೋಷಿಸಿತ್ತು. ರಶ್ಯದಿಂದ ಆಮದಾಗುವ ಅಡುಗೆ ಅನಿಲವನ್ನು ಈ ವರ್ಷಾಂತ್ಯದೊಳಗೆ ಮೂರನೇ ಎರಡರಷ್ಟು ಕಡಿತಗೊಳಿಸುವುದಾಗಿ ಯುರೋಪಿಯನ್ ಯೂನಿಯನ್ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News