×
Ad

ಡಾಲರ್ ಎದುರು ಐತಿಹಾಸಿಕ ಕನಿಷ್ಠ ಮಟ್ಟಕ್ಕೆ ಕುಸಿದ ರೂಪಾಯಿ

Update: 2022-06-14 07:19 IST

ಮುಂಬೈ: ವಿದೇಶಿ ವಿನಿಮಯ ಮಾರುಕಟ್ಟೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಡಾಲರ್ ಎದುರು ರೂಪಾಯಿ ಕನಿಷ್ಠ ಮಟ್ಟಕ್ಕೆ ಕುಸಿದ್ದು, ಸೋಮವಾರ ಪ್ರತಿ ಡಾಲರ್ ಮೌಲ್ಯ 78.28 ರೂಪಾಯಿ ಆಗಿದೆ.

ಅಮೆರಿಕದ ಫೆಡ್‍ಬ್ಯಾಂಕ್ ಬಡ್ಡಿದರವನ್ನು ಮತ್ತಷ್ಟು ಏರಿಸಲಿದೆ ಎಂಬ ಭೀತಿಯಿಂದ ವಿದೇಶಿ ಹೂಡಿಕೆದಾರರು ಷೇರು ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿರುವುದು ಇದಕ್ಕೆ ಪ್ರಮುಖ ಕಾರಣ ಎಂದು timesofindia.com ವರದಿ ಮಾಡಿದೆ.

ಅಮೆರಿಕದ ಫೆಡರಲ್ ಬ್ಯಾಂಕ್ ಬಡ್ಡಿದರವನ್ನು 75 ಮೂಲ ಅಂಶಗಳಷ್ಟು ಹೆಚ್ಚಿಸಲಿದೆ ಎಂಬ ಅಂದಾಜಿನಂತೆ ಮಾರುಕಟ್ಟೆಯಲ್ಲಿ ವಹಿವಾಟು ಆರಂಭವಾಗಿದೆ ಎಂದು ವಿದೇಶಿ ವಿನಿಮಯ ಡೀಲರ್ ಒಬ್ಬರು ಹೇಳಿದ್ದಾರೆ.

ದುರ್ಬಲವಾಗಿ ಆರಂಭವಾದ ರೂಪಾಯಿ, ವಿದೇಶಿ ಹೂಡಿಕೆದಾರರು ಭಾರತೀಯ ಷೇರುಗಳ ಮಾರಾಟಕ್ಕೆ ತೊಡಗಿದ್ದರಿಂದ 77ರ ಮಟ್ಟಕ್ಕೆ ಕುಸಿಯಿತು. ಮಧ್ಯಂತರ ವಹಿವಾಟಿನ ಅವಧಿಯಲ್ಲಿ 78.28ಕ್ಕೆ ಕುಸಿದು ಅಂತಿಮವಾಗಿ ಪ್ರತಿ ಡಾಲರ್ ಮೌಲ್ಯ 78.04 ರೂಪಾಯಿ ಆಯಿತು. ಇದು ಶುಕ್ರವಾರ ಮುಕ್ತಾಯಕ್ಕೆ ಇದ್ದ ದರವಾದ 77.84 ರೂಪಾಯಿಗಳಿಗಿಂತ 20 ಪೈಸೆಯಷ್ಟು ಕಡಿಮೆ.

ಕೇವಲ ರೂಪಾಯಿ ಮಾತ್ರವಲ್ಲದೇ ಜಪಾನ್‍ನ ಯೆನ್, ಆಸ್ಟ್ರೇಲಿಯಾ ಡಾಲರ್ ಮತ್ತು ಇಂಗ್ಲೆಂಡ್ ಪೌಂಡ್ ಕೂಡಾ ಡಾಲರ್ ಎದುರು ಕುಸಿತ ಕಂಡವು. ಡಾಲರ್ ಸೂಚ್ಯಂಕ 105ನ್ನು ತಲುಪಿದ್ದು, ಬಹುತೇಕ ಕರೆನ್ಸಿಗಳು ಇದರ ವಿರುದ್ಧ ದುರ್ಬಲವಾದವು. ರೂಪಾಯಿ ಮೌಲ್ಯದ ಜತೆಗೆ ಭಾರತದ ವ್ಯಾಪಾರ ಪಾಲುದಾರರ ಕರೆನ್ಸಿ ಕೂಡಾ ಕುಸಿದಿದ್ದು, ಬಿಲ್ಲಿಂಗ್‍ಗಳು ಡಾಲರ್‍ಗಳಲ್ಲಿ ನಡೆಯುವುದರಿಂದ ಹಾಗೂ ಬಹುತೇಕ ಆಮದುದಾರರಿಗೆ ಚೌಕಾಶಿ ಶಕ್ತಿ ಕಡಿಮೆ ಇರುವುದರಿಂದ ಆಮದು ದುಬಾರಿಯಾಗಿಯೇ ಮುಂದುವರಿಯಲಿದೆ ಎಂದು ಬ್ಯಾಂಕರ್‍ಗಳು ವಿಶ್ಲೇಷಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News