ಗುಜರಾತ್‍ನಲ್ಲಿ ಸಮೀಕ್ಷೆ ಮಾಡಲಾದ ಕಟ್ಟಡಗಳ ಪೈಕಿ ಶೇಕಡ 35 ಅಕ್ರಮ: ನಗರಾಭಿವೃದ್ಧಿ ಇಲಾಖೆ

Update: 2022-06-14 03:10 GMT

ಅಹ್ಮದಾಬಾದ್: ಗುಜರಾತ್‍ನ ಶೇಕಡ 35ರಷ್ಟು ಕಟ್ಟಡಗಳು ಅಕ್ರಮ ಎಂಬ ಆತಂಕಕಾರಿ ಅಂಶವನ್ನು ಗುಜರಾತ್ ನಗರಾಭಿವೃದ್ಧಿ ಇಲಾಖೆ ಬಹಿರಂಗಪಡಿಸಿದೆ.

ಮೂರು ತಿಂಗಳ ಅವಧಿಯಲ್ಲಿ ರಾಜ್ಯದ ಮಹಾನಗರ ಪಾಲಿಕೆಗಳು ಮತ್ತು ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಸುಮಾರು 8,320 ವಸತಿ, ವಾಣಿಜ್ಯ, ವಸತಿ ಸಂಕೀರ್ಣಗಳು ಮತ್ತು ಆಸ್ಪತ್ರೆಗಳಂಥ ವಿಶೇಷ ವರ್ಗದ ಕಟ್ಟಡಗಳ ಸಮೀಕ್ಷೆ ನಡೆಸಿದ ಬಳಿಕ, ಶೇಕಡ 35ರಷ್ಟು ಕಟ್ಟಡಗಳು ಕಟ್ಟಡ ಬಳಕೆ ಅನುಮತಿ ಪಡೆದಿಲ್ಲ ಎಂಬ ನಿರ್ಧಾರಕ್ಕೆ ಬಂದಿದೆ. ಹೆಚ್ಚುವರಿ ಮಹಡಿಗಳ ನಿರ್ಮಾಣ, ಕಟ್ಟಡಗಳ ಬಳಕೆಯಲ್ಲಿ ಬದಲಾವಣೆ ಹಾಗೂ ವ್ಯಾಪ್ತಿಯ ಸಮಸ್ಯೆಗಳು ಇದಕ್ಕೆ ಪ್ರಮುಖ ಕಾರಣ ಎಂದು timesofindia.com ವರದಿ ಮಾಡಿದೆ.

ಕಟ್ಟಡ ಬಳಕೆ ಅನುಮತಿ ಪಡೆಯದ ಕಟ್ಟಡಗಳ ವಿರುದ್ಧ ಒಂದು ವೇಳೆ ದಂಡನಾತ್ಮಕ ಕ್ರಮಗಳನ್ನು ಕೈಗೊಂಡರೆ ವ್ಯಾಪಕ ಪ್ರಮಾಣದಲ್ಲಿ ಕಟ್ಟಡಗಳನ್ನು ನೆಲಸಮ ಮಾಡಬೇಕಾಗುತ್ತದೆ. ಈ ಆಸ್ತಿ ಮಾಲಕರ ಕಾನೂನಾತ್ಮಕ ತಡೆಯನ್ನು ನಿವಾರಿಸುವ ನಿಟ್ಟಿನಲ್ಲಿ ನಿರ್ದಿಷ್ಟ ಷರತ್ತುಗಳನ್ನು ಒಳಗೊಂಡ ಸುಗ್ರೀವಾಜ್ಞೆಯನ್ನು ತರಬಹುದು ಎಂದು ನಗರಾಭಿವೃದ್ಧಿ ಇಲಾಖೆ ರಾಜ್ಯ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ.

"ಇಲಾಖೆ ಇದನ್ನು ಅಧಿಕೃತವಾಗಿ ಮುಂದುವರಿಯುವ ಮುನ್ನ ಹೈಕೋರ್ಟ್‍ಗೆ ಈ ಸಲಹೆಗಳನ್ನು ಸಲ್ಲಿಸಲಾಗುವುದು. ಹಾನಿಯನ್ನು ಕನಿಷ್ಠಗೊಳಿಸುವುದು ಇದರ ಗುರಿ" ಎಂದು ನಗರಾಭಿವೃದ್ಧಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಕಳೆದ ಜನವರಿಯಲ್ಲಿ ಸಮೀಕ್ಷಾ ಕಾರ್ಯ ಆರಂಭವಾಗಿದ್ದು, ಅಹ್ಮದಾಬಾದ್‍ನಲ್ಲಿ 1050, ಸೂರತ್‍ನಲ್ಲಿ 1000, ರಾಜಕೋಟ್‍ನಲ್ಲಿ 750, ವಡೋದರಲ್ಲಿ 800 ಕಟ್ಟಡಗಳನ್ನು ಸಮೀಕ್ಷೆ ನಡೆಸಲಾಗಿದೆ. ಈ ಪೈಕಿ ಅಹ್ಮದಾಬಾದ್‍ನಲ್ಲಿ ಶೇಕಡ 32ರಷ್ಟು ಕಟ್ಟಡಗಳಿಗೆ ಬಳಕೆ ಅನುಮತಿ ಇಲ್ಲ. ನಗರಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 2160 ಕಟ್ಟಡಗಳನ್ನು ಸಮೀಕ್ಷೆಗೆ ಗುರಿಪಡಿಸಲಾಗಿತ್ತು. 5600 ಕಟ್ಟಡಗಳನ್ನು ಎಂಟು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಯ 560 ಕಟ್ಟಡಗಳನ್ನು ಸಮೀಕ್ಷಿಸಲಾಗಿತ್ತು ಎಂದು ಅವರು ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News