ಸಶಸ್ತ್ರ ಪಡೆಗಳಿಗೆ ಸರಕಾರದ ಆಮೂಲಾಗ್ರ ನೇಮಕಾತಿ ಯೋಜನೆ 'ಅಗ್ನಿಪಥ್’ ಅನಾವರಣ
ಹೊಸದಿಲ್ಲಿ,ಜೂ.14: ಸಶಸ್ತ್ರ ಪಡೆಗಳಲ್ಲಿ ನೇಮಕಾತಿಗಾಗಿ ನೂತನ ಅಗ್ನಿಪಥ ಯೋಜನೆಯನ್ನು ಕೇಂದ್ರವು ಮಂಗಳವಾರ ಅನಾವರಣಗೊಳಿಸಿದೆ. ವೇತನ ಮತ್ತು ಪಿಂಚಣಿಗಳ ಮೊತ್ತವನ್ನು ಕಡಿಮೆಗೊಳಿಸುವ ಮತ್ತು ಶಸ್ತ್ರಾಸ್ತ್ರಗಳ ತುರ್ತು ಖರೀದಿಗೆ ಹಣವನ್ನು ಮುಕ್ತವಾಗಿಸುವ ಉದ್ದೇಶವನ್ನು ನೂತನ ಯೋಜನೆಯು ಹೊಂದಿದೆ.
ಅಗ್ನಿಪಥ ಯೋಜನೆಯನ್ನು ಪ್ರಕಟಿಸಿದ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು,ಇದೊಂದು ಐತಿಹಾಸಿಕ ನಿರ್ಧಾರವಾಗಿದೆ ಎಂದು ಹೇಳಿದರು. ಭೂಸೇನೆ,ವಾಯುಪಡೆ ಮತ್ತು ನೌಕಾಪಡೆ ಮುಖ್ಯಸ್ಥರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಯೋಜನೆಯಡಿ 17.5ರಿಂದ 21 ವರ್ಷಗಳ ವಯೋಮಿತಿಯಲ್ಲಿಯ ಸುಮಾರು 45,000 ಜನರನ್ನು ನಾಲ್ಕು ವರ್ಷಗಳ ಅವಧಿಗೆ ಸಶಸ್ತ್ರ ಪಡೆಗಳಿಗೆ ನೇಮಕ ಮಾಡಿಕೊಳ್ಳಲಾಗುವುದು. ನೇಮಕಾತಿ ಪ್ರಕ್ರಿಯೆಯು ಮುಂದಿನ 90 ದಿನಗಳಲ್ಲಿ ಆರಂಭಗೊಳ್ಳಲಿದೆ ಮತ್ತು ಮೊದಲ ತಂಡವು ಜುಲೈ 2023ರ ವೇಳೆಗೆ ಸಿದ್ಧವಾಗಲಿದೆ.
ಯೋಜನೆಯಡಿ ಆಯ್ಕೆಗೊಂಡವರನ್ನು ‘ಅಗ್ನಿವೀರರು’ ಎಂದು ಕರೆಯಲಾಗುವುದು. ಆನ್‌ಲೈನ್ ಕೇಂದ್ರೀಕೃತ ವ್ಯವಸ್ಥೆಯ ಮೂಲಕ ನೇಮಕಾತಿಗಳನ್ನು ಮಾಡಲಾಗುವುದು. ಸಶಸ್ತ್ರ ಪಡೆಗಳಲ್ಲಿನ ಸಾಮಾನ್ಯ ಹುದ್ದೆಗಳಿಗೆ ನಿಗದಿಗೊಳಿಸಿರುವ ಶೈಕ್ಷಣಿಕ ವಿದ್ಯಾರ್ಹತೆಗಳು ಅಗ್ನಿವೀರ ನೇಮಕಾತಿಗೂ ಅನ್ವಯಿಸುತ್ತವೆ. ಅಗ್ನಿಪಥ್ ಯೋಜನೆಯಡಿ ಮಹಿಳೆಯರನ್ನೂ ಸಶಸ್ತ್ರ ಪಡೆಗಳಿಗೆ ಸೇರಿಸಿಕೊಳ್ಳಲಾಗುವುದು.
ನಾಲ್ಕು ವರ್ಷಗಳ ಸೇವಾವಧಿಯು ಆರು ತಿಂಗಳ ತರಬೇತಿಯನ್ನೂ ಒಳಗೊಂಡಿರುತ್ತದೆ. ಈ ಅವಧಿಯಲ್ಲಿ ಅಗ್ನಿವೀರರಿಗೆ ಮಾಸಿಕ 30,000 ರೂ.ನಿಂದ 40,000 ರೂ.ವೇತನ ಮತ್ತು ಭತ್ಯೆಗಳನ್ನು ನೀಡಲಾಗುವುದು. ವೈದ್ಯಕೀಯ ಮತ್ತು ವಿಮೆ ಸೌಲಭ್ಯಗಳನ್ನೂ ಅವರು ಪಡೆಯಲಿದ್ದಾರೆ.
ನಾಲ್ಕು ವರ್ಷಗಳ ಬಳಿಕ ಕೇವಲ ಶೇ.25ರಷ್ಟು ಅಗ್ನಿವೀರರನ್ನು ಉಳಿಸಿಕೊಳ್ಳಲಾಗುವುದು ಮತ್ತು ಅವರು ಸಾಮಾನ್ಯ ಕೇಡರ್‌ಗೆ ಸೇರ್ಪಡೆಗೊಂಡು ಅಧಿಕಾರಿಯೇತರ ದರ್ಜೆಗಳಲ್ಲಿ ಸಂಪೂರ್ಣ 15 ವರ್ಷಗಳ ಸೇವೆಯನ್ನು ಸಲ್ಲಿಸುತ್ತಾರೆ. ಉಳಿದವರು 11ಲ.ರೂ.ನಿಂದ 12 ಲ.ರೂ.ವರೆಗಿನ ಪ್ಯಾಕೇಜ್‌ನೊಂದಿಗೆ ಸಶಸ್ತ್ರ ಪಡೆಗಳಿಂದ ನಿರ್ಗಮಿಸುತ್ತಾರೆ,ಆದರೆ ಯಾವುದೇ ಪಿಂಚಣಿಗೆ ಅವರು ಅರ್ಹರಾಗಿರುವುದಿಲ್ಲ. ಕರ್ತವ್ಯದ ಸಂದರ್ಭದಲ್ಲಿ ಗಾಯಗಳಿಂದ ಜೀವಹಾನಿ,ಅಂಗವೈಕಲ್ಯಕ್ಕೆ ಪರಿಹಾರವನ್ನು ಒದಗಿಸಲಾಗುವುದು.
ಅಗ್ನಿಪಥ್ ಯೋಜನೆಯು ಯಶಸ್ವಿಯಾದರೆ ವಾರ್ಷಿಕ ರಕ್ಷಣಾ ಬಜೆಟ್ (5.2 ಲ.ಕೋ.ರೂ)ನ ಅರ್ಧದಷ್ಟಿರುವ ವಾರ್ಷಿಕ ವೇತನ ಮತ್ತು ಪಿಂಚಣಿ ಮೊತ್ತವನ್ನು ಗಣನೀಯವಾಗಿ ತಗ್ಗಿಸಲಿದೆ.
ಯೋಜನೆಯು ಸಶಸ್ತ್ರ ಪಡೆಗಳ ‘ಯುವ ವ್ಯಕ್ತಿತ್ವ’ವನ್ನು ಹೆಚ್ಚಿಸಲಿದೆ ಎಂದು ಸರಕಾರವು ಹೇಳಿದ್ದರೆ,ಕೆಲವು ವರ್ಗಗಳಿಂದ ಟೀಕೆಗಳೂ ವ್ಯಕ್ತವಾಗಿವೆ. ಇದು ಪಡೆಗಳ ಹೋರಾಟ ಮನೋಭಾವ ಮತ್ತು ವೃತ್ತಿಪರತೆಯ ಮೇಲೆ ಪರಿಣಾಮವನ್ನುಂಟು ಮಾಡುತ್ತದೆ ಎಂದು ವಾದಿಸಿರುವ ಟೀಕಾಕಾರರು,ನಾಲ್ಕು ವರ್ಷಗಳ ಸೇವಾವಧಿಯು ಯೋಧರನ್ನು ಅಪಾಯಕ್ಕೆ ತಳ್ಳಬಹುದು ಎಂಬ ಆತಂಕವನ್ನು ವ್ಯಕ್ತಪಡಿಸಿದ್ದಾರೆ.