×
Ad

ಶರದ್ ಪವಾರ್ ಕುರಿತು ಪರೋಕ್ಷ ಟ್ವೀಟ್ ಮಾಡಿದ ವಿದ್ಯಾರ್ಥಿಯ ಬಂಧನ ಕುರಿತು ಮಹಾರಾಷ್ಟ್ರ ಸರಕಾರಕ್ಕೆ ಹೈಕೋರ್ಟ್ ತರಾಟೆ

Update: 2022-06-14 14:30 IST

ಮುಂಬೈ,ಜೂ.14: ಎನ್‌ಸಿಪಿ ವರಿಷ್ಠ ಶರದ ಪವಾರ್ ವಿರುದ್ಧ ಅವಮಾನಕಾರಿ ಟ್ವಿಟರ್ ಪೋಸ್ಟ್‌ಗಳನ್ನು ಮಾಡಿದ ಆರೋಪದಲ್ಲಿ 21ರ ಹರೆಯದ ವಿದ್ಯಾರ್ಥಿಯನ್ನು ಬಂಧಿಸಿದ್ದಕ್ಕಾಗಿ ಮಹಾರಾಷ್ಟ್ರ ಸರಕಾರವನ್ನು ತರಾಟೆಗೆತ್ತಿಕೊಂಡಿರುವ ಬಾಂಬೆ ಉಚ್ಚ ನ್ಯಾಯಾಲಯವು,ಸರಕಾರವು ತಾನು ಆಕ್ರಮಣಕಾರಿ ಎಂದು ಪರಿಗಣಿಸುವ ಪ್ರತಿಯೊಂದೂ ಟ್ವೀಟ್‌ನ್ನು ಗಂಭೀರವಾಗಿ ತೆಗೆದುಕೊಳ್ಳುತ್ತದೆಯೇ ಎಂದು ಪ್ರಶ್ನಿಸಿತು.

ನಿಖಿಲ್ ಭಾಮ್ರೆ ತನ್ನ ಟ್ವೀಟ್‌ನಲ್ಲಿ ‘ಬಾರಾಮತಿಯ ಗಾಂಧಿಗಾಗಿ ಬಾರಾಮತಿಯ ನಾಥುರಾಮ ಗೋಡ್ಸೆಯನ್ನು ಸೃಷ್ಟಿಸಲು ಇದು ಸಕಾಲವಾಗಿದೆ ’ಎಂದು ಹೇಳಿದ್ದರೆನ್ನಲಾಗಿದೆ. ಆದರೆ ಯಾವುದೇ ನಾಯಕನ ಅಥವಾ ರಾಜಕೀಯ ಪಕ್ಷದ ಹೆಸರನ್ನು ಅವರು ತನ್ನ ಟ್ವೀಟ್‌ನಲ್ಲಿ ಉಲ್ಲೇಖಿಸಿರಲಿಲ್ಲ.

ಟ್ವೀಟ್‌ವೊಂದಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಯನ್ನು ಬಂಧನದಲ್ಲಿರಿಸಿದ್ದನ್ನು ಹಿಂದೆಂದೂ ಕೇಳಿರಲಿಲ್ಲ ಎಂದು ಹೇಳಿದ ನ್ಯಾಯಮೂರ್ತಿಗಳಾದ ಎಸ್.ಎಸ್.ಶಿಂದೆ ಮತ್ತು ಮಿಲಿಂದ ಜಾಧವ ಅವರ ಪೀಠವು,‘ಪ್ರತಿದಿನ ನೂರಾರು ಸಾವಿರಾರು ಟ್ವೀಟ್‌ಗಳು ಹರಿದಾಡುತ್ತವೆ. ಪ್ರತಿಯೊಂದೂ ಟ್ವೀಟ್‌ನ್ನು ನೀವು ಅರಿವಿಗೆ ತೆಗೆದುಕೊಳ್ಳುತ್ತೀರಾ? ಇಂತಹ ಎಫ್‌ಐಆರ್‌ಗಳು ನಮಗೆ ಬೇಕಿಲ್ಲ ’ ಎಂದು ಕುಟುಕಿತು.

ವಿದ್ಯಾರ್ಥಿಯನ್ನು ಜೈಲಿನಲ್ಲಿರಿಸುವುದನ್ನು ಶರದ ಪವಾರ್ ಅವರೂ ಬಯಸುವುದಿಲ್ಲ ಎಂದೂ ನ್ಯಾಯಾಲಯವು ಹೇಳಿತು.

ತನ್ನ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗಳನ್ನು ಪ್ರಶ್ನಿಸಿ ಭಾಮ್ರೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಮಂಗಳವಾರ ನ್ಯಾಯಾಲಯವು ಕೈಗೆತ್ತಿಕೊಂಡಿತ್ತು.

ಭಾಮ್ರೆಯನ್ನು ಬಂಧಿಸಿದ ದಿನವೇ ಫೇಸ್‌ಬುಕ್‌ನಲ್ಲಿಯ ಪೋಸ್ಟ್‌ಗಾಗಿ ಮರಾಠಿ ನಟಿ ಕೇತಕಿ ಚಿತಳೆ ಅವರನ್ನೂ ಬಂಧಿಸಲಾಗಿತ್ತು. ಅವರು ತನ್ನ ಪೋಸ್ಟ್‌ನಲ್ಲಿ ಪವಾರ್‌ರನ್ನು ಹೆಸರಿಸಿರಲಿಲ್ಲವಾದರೂ ಅದು ಅವರ ಕುರಿತಾಗಿಯೇ ಇತ್ತು ಎನ್ನಲಾಗಿದೆ. ಚಿತಳೆಯವರ ಅರ್ಜಿಯೂ ಇದೇ ಪೀಠದ ಮುಂದಿದ್ದು,ಜೂ.10ರಂದು ವಿಚಾರಣೆಗೆ ಬರುವ ಸಾಧ್ಯತೆಯಿದೆ.

ನ್ಯಾಯಾಲಯವು ಭಾಮ್ರೆಯವರ ಟ್ವೀಟ್‌ಗಳನ್ನು ಪರಿಶೀಲಿಸಿದ್ದು, ಅವುಗಳಲ್ಲಿ ಯಾರನ್ನೂ ಹೆಸರಿಸಿಲ್ಲ ಮತ್ತು ನೀವು ಒಂದು ತಿಂಗಳಿನಿಂದಲೂ ವ್ಯಕ್ತಿಯನ್ನು ಬಂಧನದಲ್ಲಿ ಇಟ್ಟಿದ್ದೀರಿ. ಇದು ಬಂಧನಕ್ಕೆ ಆಧಾರವಾಗಿದ್ದಾದರೂ ಹೇಗೆ ಎಂದು ನ್ಯಾಶಿಂದೆ ಪ್ರಶ್ನಿಸಿದರು.

‘ಇಂತಹ ಪ್ರಕರಣದಲ್ಲಿ ವ್ಯಕ್ತಿಯೋರ್ವನ ವಿರುದ್ಧ ಪ್ರಕರಣವನ್ನು ದಾಖಲಿಸಿರುವುದು ದೇಶದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪುರಸ್ಕೃತ ಪವಾರ್ ವರ್ಚಸ್ಸಿಗೆ ಪೋಸ್ಟ್‌ಗಳಿಗಿಂತ ಹೆಚ್ಚಿನ ಹಾನಿಯನ್ನುಂಟು ಮಾಡುತ್ತದೆ. ಉನ್ನತ ವ್ಯಕ್ತಿಗಳ ವರ್ಚಸ್ಸಿಗೆ ಕುಂದುಂಟಾಗುವುದನ್ನು ನಾವು ಬಯಸುವುದಿಲ್ಲ ’ಎಂದೂ ಅವರು ಹೇಳಿದರು.

ಗೃಹ ಇಲಾಖೆಯಿಂದ ನಿರ್ದೇಶಗಳನ್ನು ಪಡೆದುಕೊಳ್ಳುವಂತೆ ಮತ್ತು ಭಾಮ್ರೆಯ ಬಿಡುಗಡೆಗೆ ನಿರಾಕ್ಷೇಪಣಾ ಹೇಳಿಕೆಯನ್ನು ಸಲ್ಲಿಸುವಂತೆ ನ್ಯಾಯಾಲಯವು ಸರಕಾರಿ ವಕೀಲರಿಗೆ ಆದೇಶಿಸಿತು.

ಜೂ.16ರಂದು ಪ್ರಕರಣದ ಮುಂದಿನ ವಿಚಾರಣೆ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News