ರಾಷ್ಟ್ರಪತಿ ಚುನಾವಣೆ: ಮಮತಾ ಬ್ಯಾನರ್ಜಿ ಕರೆದಿರುವ ಪ್ರತಿಪಕ್ಷಗಳ ಸಭೆಯಲ್ಲಿ ಭಾಗವಹಿಸಲಿರುವ ಕಾಂಗ್ರೆಸ್
ಹೊಸದಿಲ್ಲಿ,ಜೂ.14: ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಹಾಗೂ ಪ.ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಮುಂದಿನ ತಿಂಗಳು ನಡೆಯಲಿರುವ ರಾಷ್ಟ್ರಪತಿ ಚುನಾವಣೆಗಾಗಿ ಪ್ರತಿಪಕ್ಷ ಕಾರ್ಯತಂತ್ರವನ್ನು ಚರ್ಚಿಸಲು ಜೂ.15ರಂದು ದಿಲ್ಲಿಯಲ್ಲಿ ಆಯೋಜಿಸಿರುವ ಸಭೆಯಲ್ಲಿ ಕಾಂಗ್ರೆಸ್ ಪಾಲ್ಗೊಳ್ಳಲಿದೆ.
ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಜೈರಾಮ್ ರಮೇಶ ಮತ್ತು ರಣದೀಪ ಸುರ್ಜೆವಾಲಾ ಅವರು ಪ್ರತಿಪಕ್ಷಗಳ ಸಭೆಯಲ್ಲಿ ಕಾಂಗ್ರೆಸ್‌ನ್ನು ಪ್ರತಿನಿಧಿಸಲಿದ್ದಾರೆ.
ಈವರೆಗಿನ ಸಂಭಾವ್ಯ ಒಮ್ಮತದಂತೆ ಕಳೆದ ಕೆಲವು ದಿನಗಳಲ್ಲಿ ಎನ್‌ಸಿಪಿ ವರಿಷ್ಠ ಶರದ ಪವಾರ್ ಅವರು ಸಂಭಾವ್ಯ ಅಭ್ಯರ್ಥಿಗಳಲ್ಲಿ ಓರ್ವರಾಗಿದ್ದಾರೆ ಎಂಬ ಸುಳಿವುಗಳಿದ್ದವು. ಆದರೆ ತಾನು ರಾಷ್ಟ್ರಪತಿ ಹುದ್ದೆಗೆ ಪೈಪೋಟಿಯಲ್ಲಿ ಇಲ್ಲ ಎಂದು ಪವಾರ್ ತನ್ನ ಪಕ್ಷದ ಸಭೆಯಲ್ಲಿ ಸ್ಪಷ್ಟಪಡಿಸಿದ್ದಾರೆ. ಬುಧವಾರದ ಪ್ರತಿಪಕ್ಷಗಳ ಸಭೆಯಲ್ಲಿ ಪವಾರ್ ಭಾಗವಹಿಸಲಿದ್ದಾರೆ.
ಸಭೆಯಲ್ಲಿ ಭಾಗವಹಿಸುವಂತೆ ಕೋರಿ ಬ್ಯಾನರ್ಜಿ ಶನಿವಾರ ಪ್ರತಿಪಕ್ಷ ನಾಯಕರಿಗೆ ಪತ್ರ ಬರೆದಿದ್ದರು.
ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರ ಅಧಿಕಾರಾವಧಿಯು ಜು.24ರಂದು ಅಂತ್ಯಗೊಳ್ಳಲಿದೆ. ನೂತನ ರಾಷ್ಟ್ರಪತಿಯ ಆಯ್ಕೆಗಾಗಿ ಚುನಾವಣೆಯು ಜು.18ರಂದು ನಡೆಯಲಿದ್ದು,ಅಗತ್ಯವಾದರೆ ಜು.21ರಂದು ಮತಗಳ ಎಣಿಕೆ ನಡೆಯಲಿದೆ.
ಬಿಜೆಪಿ ನೇತೃತ್ವದ ಆಡಳಿತ ಮೈತ್ರಿಕೂಟವು ತನ್ನ ಅಭ್ಯರ್ಥಿಯ ಜಯವನ್ನು ಖಚಿತಪಡಿಸಲು ಅಗತ್ಯವಾದ ಬೆಂಬಲವನ್ನು ಹೊಂದಿಲ್ಲ. ತನ್ನ ಅಭ್ಯರ್ಥಿಯನ್ನು ಗೆಲ್ಲಿಸಲು 13,000 ಮತಗಳ ಕೊರತೆಯನ್ನು ಅದು ಎದುರಿಸುತ್ತಿದೆ.2017ರ ರಾಷ್ಟ್ರಪತಿ ಚುನಾವಣೆಯಲ್ಲಿ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರ ಟಿಆರ್‌ಎಸ್ ಪಕ್ಷವು ಬಿಜೆಪಿ ಅಭ್ಯರ್ಥಿ ರಾಮನಾಥ ಕೋವಿಂದ್ ಅವರನ್ನು ಬೆಂಬಲಿಸಿತ್ತು. ಈ ಸಲ ರಾವ್ ಅವರು ಬಿಜೆಪಿಯನ್ನು ಜಂಟಿಯಾಗಿ ಎದುರಿಸಲು ಪ್ರತಿಪಕ್ಷಗಳನ್ನು ಒಗ್ಗೂಡಿಸುವ ಪ್ರಯತ್ನಗಳ ಭಾಗವಾಗಿದ್ದಾರೆ.