×
Ad

ಭಟ್ಕಳ; ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಎಂ.ಆರ್.ಮಾನ್ವಿ ಅವಿರೋಧ ಆಯ್ಕೆ

Update: 2022-06-14 22:47 IST

ಭಟ್ಕಳ: ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಂಗ ಸಂಸ್ಥೆಯಾದ ಭಟ್ಕಳ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಎಂ.ಆರ್.ಮಾನ್ವಿ ಕಾರ್ಯದರ್ಶಿಯಾಗಿ ಶೈಲೇಶ ವೈದ್ಯ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 

ಉತ್ತರ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಿ. ಸುಬ್ರಾಯ ಭಟ್ಟ ಬಕ್ಕಳ ಅವರ ಸೂಚನೆಯ ಮೇರೆಗೆ ಜೂ.14ರಂದು ಸಂಜೆ ನಡೆದ ತಾಲೂಕಾ ಪದಾಧಿಕಾರಿಗಳ ಸಭೆಯಲ್ಲಿ ಜಿಲ್ಲಾ ಉಪಾಧ್ಯಕ್ಷ ಭವಾನಿಶಂಕರ್ ಅವರು ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು. 

ಆರಂಭದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಎಂ.ಆರ್.ಮಾನ್ವಿಯವರ ಹೆಸರನ್ನು ರಾಧಾಕೃಷ್ಣ ಭಟ್ಟ ಸೂಚಿಸಿದರು. ಫಯ್ಯಾಜ್ ಮುಲ್ಲಾ ಅನುಮೋದಿಸಿದರು. ಉಪಾಧ್ಯಕ್ಷರಾಗಿ ಮೋಹನ ನಾಯ್ಕ, ಕಾರ್ಯದರ್ಶಿಯಾಗಿ ಶೈಲೇಶ ವೈದ್ಯ, ಖಜಾಂಚಿಯಾಗಿ ರಿಜ್ವಾನ್ ಗಂಗಾವಳಿ ಅವರು ಕೂಡಾ ಅವಿರೋಧವಾಗಿ ಆಯ್ಕೆಯಾದರು. ಸಂಘದ ಗೌರವಾಧ್ಯಕ್ಷ ಸ್ಥಾನಕ್ಕೆ ಸ್ಥಾಪಕ ಅಧ್ಯಕ್ಷ ರಾಧಾಕೃಷ್ಣ ಭಟ್ಟ ಅವರನ್ನು ಆಯ್ಕೆ ಮಾಡಲಾಯಿತು. 

ನಿಕಟಪೂರ್ವ ಅಧ್ಯಕ್ಷ ಭಾಸ್ಕರ ನಾಯ್ಕ ಅವರು ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರಿಸಿದರು. 

ಈ ಸಂದರ್ಭದಲ್ಲಿ ನೂತನ ಅಧ್ಯಕ್ಷ ಮಹಮ್ಮದ್ ರಜಾ ಮಾನ್ವಿ ಮಾತನಾಡಿ, ಸಂಘ ಮತ್ತು ಸದಸ್ಯರ ಹಿತಾಸಕ್ತಿ ಕಾಪಾಡುವುದರೊಂದಿಗೆ ಸಂಘದ ಆಶಯಗಳನ್ನು ಈಡೇರಿಸುವಲ್ಲಿ ಎಲ್ಲರ ವಿಶ್ವಾಸದೊಂದಿಗೆ ಕೆಲಸ ನಿರ್ವಹಿಸುವುದಾಗಿ ತಿಳಿಸಿದ ಅವರು,  ಮುಂದಿನ ದಿನಗಳಲ್ಲಿ ಪ್ರತಿ ತಿಂಗಳು ಒಂದೊಂದು ಚಟುವಟಿಕೆಗಳನ್ನು ಮಾಡುವುದರ ಮೂಲಕ ಸಂಘವನ್ನು ಸದೃಢವನ್ನಾಗಿ ಮಾಡುವ ಸಂಕಲ್ಪ ಕೈಗೊಂಡರು.

ಗೌರವಾಧ್ಯಕ್ಷರಾಗಿ ಆಯ್ಕೆಗೊಂಡ ರಾಧಾಕೃಷ್ಣ ಭಟ್ಟ, ಸಂಘದ ಸದಸ್ಯರು ಪರಸ್ಪರ ವಿಶ್ವಾಸದಿಂದ, ಸಂಘದ, ಸದಸ್ಯರ ಹಾಗೂ ಸಮಾಜದ ಹಿತ ಕಾಪಾಡುವಂತೆ ಕರೆ ನೀಡಿದರು. ಜಿಲ್ಲಾ ಉಪಾಧ್ಯಕ್ಷ ಭವಾನಿಶಂಕರ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು. 
 
ಜು.2ಕ್ಕೆ ಪತ್ರಿಕಾ ದಿನಾಚರಣೆ; ನಂತರ ನಡೆದ ಸಭೆಯಲ್ಲಿ ಜುಲೈ 2ರಂದು ಪತ್ರಿಕಾ ದಿನಾಚರಣೆಯನ್ನು ಆಚರಿಸಲು ನಿರ್ಧರಿಸಲಾಯಿತು. ಸಂಘದ ವತಿಯಿಂದ ಹಿರಿಯ ಸಮಾಜ ಸೇವಕ ಸೈಯದ್ ಹಸನ್ ಬರ್ಮಾವರ ಅವರನ್ನು ಸಂಘದ ವತಿಯಿಂದ ಸನ್ಮಾನಿಸಿ, ಗೌರವಿಸುವ ಕುರಿತೂ ನಿರ್ಣಯಿಸಲಾಯಿತು. 

ಸಭೆಯಲ್ಲಿ ಜಿಲ್ಲಾ ಸಮಿತಿ ಸದಸ್ಯ ಫಯಾಜ್ ಮುಲ್ಲಾ, ರಾಘವೇಂದ್ರ ಹೆಬ್ಬಾರ್, ಅತೀಕುರ್ರಹ್ಮಾನ್‌ ಶಾಬಂದ್ರಿ, ಇನಾಯತುಲ್ಲಾ ಗವಾಯಿ ಮುಂತಾದವರು ಉಪಸ್ಥತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News