×
Ad

ಭಟ್ಕಳ: ವೆಲ್ಫೇರ್ ಪಾರ್ಟಿ ಇಂಡಿಯಾದ ರಾಷ್ಟ್ರೀಯ ನಾಯಕ ಜಾವೀದ್ ಬಿಡುಗಡೆಗೆ ಆಗ್ರಹಿಸಿ ಪ್ರತಿಭಟನೆ

Update: 2022-06-14 22:50 IST

ಭಟ್ಕಳ: ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ರಾಷ್ಟ್ರೀಯ ನಾಯಕ ಜಾವೀದ್ ಮೊಹಮ್ಮದ್ ರನ್ನು ತಕ್ಷಣ ಬಿಡುಗಡೆ ಮಾಡುವಂತೆ ಮತ್ತು ದೇಶದಲ್ಲಿ ಬುಲ್ಡೋಜರ್ ಗುಂಡಾಗಿರಿ ನಿಲ್ಲಿಸುವಂತೆ ಆಗ್ರಹಿಸಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಉ.ಕ. ಜಿಲ್ಲಾ ಘಟಕ ಹಳೆ ತಹಸಿಲ್ದಾರ್ ಕಚೇರಿ ಎದುರು ಮಂಗಳವಾರ  ಪ್ರತಿಭಟನೆ ನಡೆಸಿತು. 

ಈ ಸಂದರ್ಭದಲ್ಲಿ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ವೆಲ್ಫೇರ್ ಪಾರ್ಟಿ ರಾಜ್ಯಾಧ್ಯಕ್ಷ ಅಡ್ವಕೇಟ್ ತಾಹೀರ್ ಹುಸೇನ್,  ಸರಕಾರದ ವಿರುದ್ಧ ಪ್ರತಿಭಟಿಸುವ ಪ್ರಜಾಪ್ರಭುತ್ವ ಹಕ್ಕನ್ನು ಕಸಿದುಕೊಂಡಿರುವ ಭಾಜಪ ಇದೊಂದು ನೆಪ ಮಾತ್ರವಾಗಿದ್ದು, ಸರಕಾರದ ವಿರುದ್ಧದ ಯಾವುದೇ ಪ್ರತಿಭಟನೆಯನ್ನು ಹೀಗೆ ಅಧಿಕಾರ ಬಲದಿಂದ ಹತ್ತಿಕ್ಕುವುದು ಇವರ ಸರ್ವಾಧಿಕಾರಿ ಧೋರಣೆಯ ಭಾಗವಾಗಿದೆ ಎಂದು ಆರೋಪಿಸಿದರು. 

ದೇಶವು ಇಂದು ಅದರ ಪ್ರಜಾಪ್ರಭುತ್ವ ಬುನಾದಿಯಿಂದ ಹಳಿ ತಪ್ಪುತ್ತಿರುವ ಅಪಾಯದಲ್ಲಿರುವುದು ಆತಂಕಕಾರಿ ಯಾಗಿದೆ.  ಭಾಜಪ ಮುನ್ನಡೆಸುವ ಇಂದಿನ ಕೇಂದ್ರ ಸರಕಾರ ಮತ್ತು ಕರ್ನಾಟಕವೂ ಸೇರಿದಂತೆ ಕೆಲವು ರಾಜ್ಯ ಸರಕಾರದ ಆಡಳಿತದ ವೈಖರಿ ನಿರಕುಂಶ ಪ್ರಭುತ್ವ ಅಥವಾ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದೆ ಮಾತ್ರವಲ್ಲ ಇಂದು ದೇಶದಾದ್ಯಂತ ಅಘೋಷಿತ ತುರ್ತು ಪರಿಸ್ಥಿತಿಯ ನಿರ್ಮಾಣವಾಗಿದೆ. ಇದಕ್ಕೆ ಪೂರಕವಾಗಿಯೇ ಎಂಬಂತೆ, ರಾಜಕೀಯದಲ್ಲಿಯೇ ಅಪೂರ್ವವಾದ ಕೇವಲ ಮೌಲ್ಯಾಧಾರಿತ ತಳಹದಿಯಲ್ಲಿ ಕ್ರಿಯಾಶೀಲವಾಗಿರುವ ರಾಜಕೀಯ ಪಕ್ಷವಾಗಿರುವ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಇದರ ಮುಖಂಡ ಮುಹಮ್ಮದ್ ಜಾವೇದ್ ಅವರನ್ನು, ಪ್ರವಾದಿ  ನಿಂದನೆಯ ವಿರುದ್ಧ  ಪ್ರಯಾಗ್ ರಾಜ್ ನಲ್ಲಿ  ಸಾಂವಿಧಾನಿಕವಾಗಿ ಪ್ರತಿಭಟಿಸಿದ ಹಿನ್ನೆಲೆಯಲ್ಲಿ, ಅವರ  ಕುಟುಂಬ ಸಹಿತ ಬಂಧಿಸಿರುವುದು ಖಂಡನೀಯವಾಗಿದೆ ಎಂದು ಹೇಳಿದ ಅವರು, ಪ್ರವಾದಿ ನಿಂದನೆ ಹೇಳಿಕೆಯ ವಿರುದ್ಧದ ವಿದೇಶಿಯರ ಪ್ರತಿಭಟನೆ, ಬಹಿಷ್ಕರಿಸಿದಕ್ಕೆ ಮಣಿಯುವ ಕೇಂದ್ರ ಸರಕಾರ ಸ್ವದೇಶಿ ಜನಗಳಿಗೆ ಮಾತ್ರ ಪ್ರತಿಭಟಿಸುವ ಹಕ್ಕನ್ನೇ ನಿರಾಕರಿಸುತ್ತಿರುವುದು ಸರಕಾರದ  ದ್ವಂದ್ವ ನೀತಿಯನ್ನು  ಮತ್ತು  ಎಲ್ಲಾ ಧರ್ಮಗಳ ಬಗ್ಗೆ ಸರಕಾರವು ಗೌರವ ಹೊಂದಿದೆ ಎಂಬ ಅಂತರ್ ರಾಷ್ಟ್ರೀಯ ಹೇಳಿಕೆಯ ಅಪ್ರಾಮಾಣಿಕತೆಯನ್ನೂ ತೋರಿಸುತ್ತದೆ ಮಾತ್ರವಲ್ಲ ಇಂದು ಸರಕಾರದ ಪ್ರತಿಯೊಂದು ಹೇಳಿಕೆಗಳು ಮತ್ತು ಅದಕ್ಕೆ ವಿರುದ್ಧವಾಗಿ ಅದು ಅನುಸರಿಸುತ್ತಿರುವ ನೀತಿಯು ವಿಪರ್ಯಾಸದ ಪರಮಾವಧಿಯಾಗಿದೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಡಾ. ನಸೀಮ್ ಖಾನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆಸಿಫ್ ಶೇಕ್, ಪಕ್ಷದ ಮುಖಂಡರಾದ ಅಸ್ಲಂ ಶೇಕ್, ಮಾಜಿದ್ ಕೋಲ, ಅಬ್ದುಲ್ ಜಬ್ಬಾರ್ ಅಸದಿ, ಝಹೂರ್,  ಶೌಕತ್ ಖತೀಬ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News