ಯುದ್ಧದಿಂದ ಮಾದಕ ಪದಾರ್ಥ ಸಮಸ್ಯೆ ಉಲ್ಬಣ ಸಾಧ್ಯತೆ ಇಯು ಡ್ರಗ್ಸ್ ಏಜೆನ್ಸಿ ಎಚ್ಚರಿಕೆ
ಲಿಸ್ಬನ್, ಜೂ.14: ಉಕ್ರೇನ್ ಮೇಲಿನ ರಶ್ಯದ ಆಕ್ರಮಣವು ಯುರೋಪ್‌ನಲ್ಲಿ ಮಾದಕ ಪದಾರ್ಥಗಳಿಗೆ ಹೊಸ ಅವಕಾಶವನ್ನು ಸೃಷ್ಟಿಸಬಹುದು, ಕಳ್ಳ ಸಾಗಾಣಿಕೆ ಮಾರ್ಗದಲ್ಲಿ ಬದಲಾವಣೆಯನ್ನು ಪ್ರಚೋದಿಸಬಹುದು ಮತ್ತು ಇನ್ನಷ್ಟು ಜನರನ್ನು ಮಾದಕ ಪದಾರ್ಥಗಳಿಗೆ ಒಡ್ಡುವ ಸಂಭವನೀಯತೆಯಿದೆ ಎಂದು ಲಿಸ್ಬನ್ ಮೂಲದ ಯುರೋಪಿಯನ್ ಯೂನಿಯನ್ ಡ್ರಗ್ಸ್ ಏಜೆನ್ಸಿ ಮಂಗಳವಾರ ಎಚ್ಚರಿಕೆ ನೀಡಿದೆ.
ಯುದ್ಧದ ಸಂದರ್ಭ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾದವರು ಮುಂದಿನ ದಿನದಲ್ಲಿ ಡ್ರಗ್ಸ್‌ಗಳ ಚಟ ಬೆಳೆಸುವ ಸಾಧ್ಯತೆ ಹೆಚ್ಚಿದೆ ಎಂದು ‘ ದಿ ಯುರೋಪಿಯನ್ ಮಾನಿಟರಿಂಗ್ ಸೆಂಟರ್ ಫಾರ್ ಡ್ರಗ್ಸ್ ಆ್ಯಂಡ್ ಡ್ರಗ್ ಅಡಿಕ್ಷನ್(ಇಎಂಸಿಡಿಡಿಎ) ತನ್ನ ವಾರ್ಷಿಕ ವರದಿಯಲ್ಲಿ ಉಲ್ಲೇಖಿಸಿದೆ. ಭದ್ರತೆ ಹೆಚ್ಚಿದ ಮಾರ್ಗಗಳ ಬದಲು ಪರ್ಯಾಯ ದಾರಿಗಳನ್ನು ಮಾದಕ ಪದಾರ್ಥ ಕಳ್ಳಸಾಗಣೆದಾರರು ಅನ್ವೇಷಿಸಬಹುದು. ಯುದ್ಧದಿಂದಾಗಿ ಉಕ್ರೇನ್‌ನಿಂದ ನೆರೆಯ ದೇಶಗಳಿಗೆ ಪಲಾಯನ ಮಾಡಿದವರಲ್ಲಿ ಮಾದಕವಸ್ತು ಬಳಸುವವರೂ ಇರುವ ಸಾಧ್ಯತೆಯಿದ್ದು ಇದರಿಂದ ಉಕ್ರೇನ್ ಗಡಿಭಾಗದ ದೇಶಗಳ ಆರೋಗ್ಯ ಕ್ಷೇತ್ರದ ಮೇಲೆ ಹೆಚ್ಚಿನ ಒತ್ತಡ ಬೀಳುವ ಸಾಧ್ಯತೆಯಿದೆ . ಮಾದಕ ಪದಾರ್ಥ ಬಳಸದವರಿಗೂ ಅಪಾಯದ ಸಾಧ್ಯತೆಯಿದೆ. ಚಿಕಿತ್ಸೆಯ ಮುಂದುವರಿಕೆ, ಭಾಷಾ ಸೇವೆ , ವಾಸ್ತವ್ಯ ಕಲ್ಪಿಸುವುದು ಹಾಗೂ ಸಾಮಾಜಿಕ ಕಲ್ಯಾಣ ಸೇವೆ ಒದಗಿಸುವುದಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಿದೆ ಎಂದು ವರದಿ ಹೇಳಿದೆ.
ಕಳೆದ ಆಗಸ್ಟ್‌ನಲ್ಲಿ ತಾಲಿಬಾನ್‌ಗಳ ನಿಯಂತ್ರಣಕ್ಕೆ ಬಂದಿರುವ ಅಫ್ಘಾನಿಸ್ತಾನದಲ್ಲಿ ಎದುರಾಗಿರುವ ತೀವ್ರ ಆರ್ಥಿಕ ಬಿಕ್ಕಟ್ಟಿನಿಂದಾಗಿ ಆ ದೇಶ ಮಾದಕ ಪದಾರ್ಥಗಳ ಮಾರಾಟವನ್ನು ಪ್ರಮುಖ ಆದಾಯ ಮೂಲವನ್ನಾಗಿಸುವ ಸಾಧ್ಯೆತಯೂ ಇರುವುದರಿಂದ ಆ ದೇಶದ ಮೂಲಕ ಯುರೋಪ್‌ಗೆ ಹೆರಾಯ್ನೆ ಕಳ್ಳಸಾಗಣೆ ಹೆಚ್ಚಬಹುದು. ಮಾದಕ ಪದಾರ್ಥಗಳ ಉತ್ಪಾದನೆ, ಮಾರಾಟ ಮತ್ತು ಕಳ್ಳಸಾಗಣಿಕೆಗೆ ನಿಷೇಧವಿದ್ದರೂ ಅಫ್ಘಾನ್‌ನಲ್ಲಿ ಮಾದಕ ವಸ್ತುಗಳ ಕೃಷಿ ಹೆಚ್ಚಿರುವ ವರದಿಯಿದೆ ಎಂದು ಸಂಸ್ಥೆ ಹೇಳಿದೆ.
ಯುರೋಪ್‌ನಲ್ಲಿನ ಮಾದಕ ವಸ್ತು ಸಮಸ್ಯೆಯ ಮೇಲೆ ಅಂತರಾಷ್ಟ್ರೀಯ ಬೆಳವಣಿಗೆಯ ಪ್ರಭಾವದ ಕುರಿತು ಆತಂಕ ಹೆಚ್ಚಿದೆ. ಮಾದಕ ವಸ್ತುಗಳ ಬಳಕೆಯ ಪ್ರಮಾಣ ಸಾಂಕ್ರಾಮಿಕದ ಪೂರ್ವದ ಅವಧಿಯ ಮಟ್ಟ ತಲುಪಿರುವ ಜತೆಗೇ ಮಾದಕ ಪದಾರ್ಥಗಳ ಉತ್ಪಾದನೆಯೂ ಹೆಚ್ಚಿದೆ ಎಂದು ಇಎಂಸಿಡಿಡಿಎ ಹೇಳಿದ್ದು, ಮಾದಕ ಪದಾರ್ಥಗಳ ಕಳ್ಳಸಾಗಣೆಯನ್ನು ನಿರ್ಬಂಧಿಸುವ ಉಪಕ್ರಮ ಹೆಚ್ಚಿಸುವಂತೆ ಯುರೋಪಿಯನ್ ದೇಶಗಳಿಗೆ ಕರೆ ನೀಡಿದೆ. ಸ್ಥಾಪಿತ ಮಾದಕ ವಸ್ತು ಮಾರಾಟ ಜಾಲದ ಮಾಹಿತಿ ಅಷ್ಟು ಸುಲಭದಲ್ಲಿ ದೊರಕುವುದಿಲ್ಲ ಮತ್ತು ಸದಾ ಹೊಸ ಪದಾರ್ಥಗಳು ಹೊರ ಹೊಮ್ಮುತ್ತಾ ಇರುತ್ತವೆ. ಇದರಿಂದ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಎಲ್ಲರ ಮೇಲೂ ಪರಿಣಾಮ ಬೀರುತ್ತದೆ ಎಂದು ಇಎಂಸಿಡಿಡಿಎ ನಿರ್ದೇಶಕ ಅಲೆಕ್ಸಿಸ್ ಗೂಸ್ಡೀಲ್ ಹೇಳಿದ್ದಾರೆ. ಯುರೋಪಿಯನ್ ಯೂನಿಯನ್‌ನಲ್ಲಿ 2020ರಲ್ಲಿ ದಾಖಲೆ ಪ್ರಮಾಣದ 213 ಟನ್‌ಗಳಷ್ಟು ಕೊಕೇನ್ ಜಫ್ತಿ ಮಾಡಲಾಗಿದ್ದು 350ಕ್ಕೂ ಅಧಿಕ ಮಾದಕ ವಸ್ತು ಉತ್ಪಾದಿಸುವ ಪ್ರಯೋಗಾಲಯಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ವರದಿ ಹೇಳಿದೆ.