ಗುಜರಾತ್: ಗಾಂಧಿನಗರದ ರಸ್ತೆಗೆ ಪ್ರಧಾನಿ ಮೋದಿ ತಾಯಿಯ ಹೆಸರು

Update: 2022-06-16 03:17 GMT
File Photo: PTI

ಅಹ್ಮದಾಬಾದ್: ಪ್ರಧಾನಿ ನರೇಂದ್ರ ಮೋದಿಯವರ ತಾಯಿ ಹೀರಾಬಾ ಅವರು ಜೂನ್ 18ರಂದು 100ನೇ ವರ್ಷಕ್ಕೆ ಪದಾರ್ಪಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಬುಧವಾರ ಗುಜರಾತ್ ರಾಜಧಾನಿ ಗಾಂಧಿನಗರದ ರಸ್ತೆಯೊಂದಕ್ಕೆ ಅವರ ಹೆಸರು ಇಡಲಾಗಿದೆ.

"ಹೀರಾಬಾ 100ನೇ ವರ್ಷಕ್ಕೆ ಪದಾರ್ಪಣೆ ಮಾಡುತ್ತಿರುವ ಸಂದರ್ಭದಲ್ಲಿ, ಮುಂದಿನ ಪೀಳಿಗೆ ಅವರಿಂದ ಪ್ರೇರಣೆ ಪಡೆಯುವ ಸಲುವಾಗಿ ರಾಯ್ಸನ್ ಪ್ರದೇಶದ 80 ಮೀಟರ್ ರಸ್ತೆಗೆ ಹಿರಾಬಾ ಮಾರ್ಗ್ ಎಂದು ನಾಮಕರಣ ಮಾಡಲು ನಾವು ನಿರ್ಧರಿಸಿದ್ದೇವೆ" ಎಂದು ಗಾಂಧಿನಗರ ಮೇಯರ್ ಹಿತೇಶ್ ಮಕ್ವಾನಾ ಪ್ರಕಟಿಸಿದ್ದಾರೆ.

ಹೀರಾಬಾ ಅವರು ಪ್ರಧಾನಿಯ ತಮ್ಮ ಪಂಕಜ್ ಮೋದಿ ಜತೆ ಗಾಂಧಿನಗರದ ಹೊರವಲಯದ ರಾಯ್ಸನ್ ಗ್ರಾಮದಲ್ಲಿ ವಾಸವಿದ್ದಾರೆ. ಈ ಪ್ರದೇಶ ಬಿಜೆಪಿ ಆಡಳಿತದ ಗಾಂಧಿನಗರ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿದೆ. ಹೀರಾಬಾ ಅವರು 1923ರ ಜೂನ್ 18ರಂದು ಜನಿಸಿದ್ದು, 2022ರ ಜೂನ್ 18ರಂದು 100ನೇ ವರ್ಷಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ ಎಂದು ಪಂಕಜ್ ಮೋದಿ ಹೇಳಿದ್ದಾರೆ.

ಜೂನ್ 18ರಂದು ಗುಜರಾತ್‍ಗೆ ಭೇಟಿ ನೀಡಲಿರುವ ಪ್ರಧಾನಿ ನರೇಂದ್ರ ಮೋದಿ ಅಂದು ತಾಯಿಯನ್ನು ಭೇಟಿ ಮಾಡುವ ಸಾಧ್ಯತೆ ಇದೆ ಎಂದು ಅಧಿಕೃತ ಮೂಲಗಳು ಹೇಳಿವೆ.

ಮೋದಿ ಕುಟುಂಬ ಅಂದು ಅಹ್ಮದಾಬಾದ್‍ನ ಜಗನ್ನಾಥ ದೇವಾಲಯದಲ್ಲಿ 'ಭಂದಾರೊ' (ಸಮುದಾಯ ಭೋಜನ) ಆಯೋಜಿಸಲು ನಿರ್ಧರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News