ಯುವಕರಿಗೆ ದೇಶ ಸೇವೆ ಮಾಡಲು ನಾಲ್ಕೇ ವರ್ಷ ಏಕೆ: ‘ಅಗ್ನಿಪಥ’ ಯೋಜನೆ ಕುರಿತು ಬಿಜೆಪಿ ಸಂಸದ ವರುಣ್ ಗಾಂಧಿ ಪ್ರಶ್ನೆ
ಹೊಸದಿಲ್ಲಿ: ಸಶಸ್ತ್ರ ಪಡೆಗಳಿಗೆ ಸೈನಿಕರ ನೇಮಕಾತಿಗಾಗಿ ಹೊಸದಾಗಿ ಘೋಷಿಸಲಾದ ‘ಅಗ್ನಿಪಥ ‘ ಯೋಜನೆ ಕುರಿತು ಬಿಜೆಪಿ ಲೋಕಸಭಾ ಸದಸ್ಯ ವರುಣ್ ಗಾಂಧಿ ಬುಧವಾರ ಪ್ರಶ್ನೆಗಳನ್ನು ಎತ್ತಿದ್ದಾರೆ. ಸರಕಾರವು ಐದು ವರ್ಷಗಳಿಗೆ ಚುನಾಯಿತವಾಗುತ್ತದೆ. ಆದರೆ ಯುವಕರಿಗೆ ದೇಶ ಸೇವೆ ಮಾಡಲು ನಾಲ್ಕು ವರ್ಷಗಳನ್ನು ಏಕೆ ನೀಡಲಾಗುತ್ತಿದೆ ಎಂದು ಕೇಳಿದ್ದಾರೆ.
ಭೂಸೇನೆ, ನೌಕಾಪಡೆ ಹಾಗೂ ವಾಯುಪಡೆಗೆ ಸೈನಿಕರ ನೇಮಕಾತಿಗಾಗಿ ಸರಕಾರ ಮಂಗಳವಾರ ಅನಾವರಣಗೊಳಿಸಿರುವ ಪರಿವರ್ತನಾ ಯೋಜನೆಯ ಬಗ್ಗೆ ಯುವಕರು ತಮ್ಮ ಕಳವಳವನ್ನು ವ್ಯಕ್ತಪಡಿಸುವ ವೀಡಿಯೊವನ್ನು ಪಿಲಿಭಿತ್ ಸಂಸದ ವರುಣ್ ಗಾಂಧಿ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.
ರಕ್ಷಣಾ ಪಡೆಗಳಿಗೆ ಹೊಸ ನೇಮಕಾತಿ ಯೋಜನೆಯ ಸಂಭಾವನೆಯ ವಿವರಗಳನ್ನು ಹಂಚಿಕೊಂಡ ವರುಣ್ ಗಾಂಧಿ ಅವರು ಟ್ವೀಟ್‌ನಲ್ಲಿ ಈ ಯೋಜನೆಯ ಬಗ್ಗೆ ಅಭಿಪ್ರಾಯಗಳನ್ನು ಆಹ್ವಾನಿಸಿದ್ದಾರೆ ಹಾಗೂ ಅಗ್ನಿಪಥ ಯೋಜನೆಗೆ ಸಂಬಂಧಿಸಿದಂತೆ ಯುವಕರ ಮನಸ್ಸಿನಲ್ಲಿ ಅನೇಕ "ಪ್ರಶ್ನೆಗಳು ಮತ್ತು ಅನುಮಾನಗಳು" ಇವೆ ಎಂದು ಹೇಳಿದ್ದಾರೆ.
ತಮ್ಮ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಯುವಕರ ವೀಡಿಯೊವನ್ನು ಉಲ್ಲೇಖಿಸಿದ ಅವರು, ಸರಕಾರ ಕೂಡ ಐದು ವರ್ಷದ ಅವಧಿಗೆ ಆಯ್ಕೆಯಾಗುತ್ತದೆ. ಯುವಕರಿಗೆ ಮಾತ್ರ ದೇಶ ಸೇವೆ ಮಾಡಲು ನಾಲ್ಕು ವರ್ಷಗಳನ್ನು ಏಕೆ ನೀಡಲಾಗುತ್ತಿದೆ ಎಂದು ಕೇಳಿದ್ದಾರೆ.