ಪ್ರವಾದಿ ನಿಂದನೆ: ಬಿಜೆಪಿ ವಕ್ತಾರರ ವರ್ತನೆ ಖಂಡಿಸಿದ ಅಮೆರಿಕ

Update: 2022-06-17 17:32 GMT

ವಾಷಿಂಗ್ಟನ್ : ಬಿಜೆಪಿಯ ವಕ್ತಾರರಾದ ನವೀನ್ ಜಿಂದಾಲ್ ಮತ್ತು ನೂಪುರ್ ಶರ್ಮಾ ಅವರು ಪ್ರವಾದಿ ಮುಹಮ್ಮದ್‌ ವಿರುದ್ಧ ನೀಡಿರುವ ಹೇಳಿಕೆಯನ್ನು ಅಮೆರಿಕ ಖಂಡಿಸಿದೆ.

"ಬಿಜೆಪಿಯ ಇಬ್ಬರು ಪದಾಧಿಕಾರಿಗಳು ವ್ಯಕ್ತಪಡಿಸಿರುವ ಆಕ್ರಮಣಕಾರಿ ಹೇಳಿಕೆಗಳನ್ನು ನಾವು ಖಂಡಿಸುತ್ತೇವೆ; ಆದರೆ ಈ ಅಭಿಪ್ರಾಯಗಳನ್ನು ಬಹಿರಂಗವಾಗಿ ಖಂಡಿಸಿರುವ ಪಕ್ಷದ ಕ್ರಮ ನಮಗೆ ಸಂತಸ ತಂದಿದೆ" ಎಂದು ರಕ್ಷಣಾ ಇಲಾಖೆ ವಕ್ತಾರ ನೆಡ್ ಪ್ರೈಸ್ ಹೇಳಿರುವುದಾಗಿ ndtv.com ವರದಿ ಮಾಡಿದೆ.

"ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಸೇರಿದಂತೆ ಮಾನವ ಹಕ್ಕು ಆತಂಕಗಳ ಬಗ್ಗೆ ನಿರಂತರವಾಗಿ ಉನ್ನತ ಅಧಿಕಾರಿಗಳ ಮಟ್ಟದಲ್ಲಿ ಭಾರತದ ಜತೆ ಸಂಪರ್ಕದಲ್ಲಿದ್ದೇವೆ. ಭಾರತ ಮಾನವ ಹಕ್ಕುಗಳನ್ನು ಗೌರವಿಸುವಂತೆ ನಾವು ಭಾರತವನ್ನು ಪ್ರೋತ್ಸಾಹಿಸುತ್ತಿದ್ದೇವೆ" ಎಂದು ಅವರು ತಿಳಿಸಿದರು ಎಂದು ಎಎಫ್‍ಪಿ ವರದಿ ಮಾಡಿದೆ.

ಪ್ರಧಾನಿ ನರೇಂದ್ರ ಮೋದಿಯವರ ಭಾರತೀಯ ಜನತಾ ಪಕ್ಷದ ವಕ್ತಾರೆ ನೂಪುರ್ ಶರ್ಮಾ ಮೇ 26ರಂದು ಪ್ರವಾದಿ ಮುಹಮ್ಮದ್ ಅವರ ವಿರುದ್ಧ ನೀಡಿದ ಹೇಳಿಕೆ ವ್ಯಾಪಕ ಪ್ರತಿಭಟನೆಗೆ ಕಾರಣವಾಗಿತ್ತು. ಭಾರತದ ಜತೆ ನಿಕಟ ಸಂಪರ್ಕ ಹೊಂದಿರುವ ಅರಬ್ ಜಗತ್ತು ಕೂಡಾ ರಾಜತಾಂತ್ರಿಕ ಮಟ್ಟದಲ್ಲಿ ವ್ಯಾಪಕ ಅಸಮಾಧಾನ ವ್ಯಕ್ತಪಡಿಸಿತ್ತು.

ಆಕ್ರೋಶವನ್ನು ಶಮನಗೊಳಿಸುವ ಕ್ರಮವಾಗಿ ಬಿಜೆಪಿ ನೂಪುರ್ ಶರ್ಮಾ ರನ್ನು ಅಮಾನತು ಮತ್ತು ಪ್ರವಾದಿ ಮುಹಮ್ಮದ್ ಅವರ ವಿರುದ್ಧ ಪ್ರಚೋದನಕಾರಿ ಟ್ವೀಟ್ ಮಾಡಿದ ಆರೋಪದಲ್ಲಿ ನವೀನ್ ಕುಮಾರ್ ಜಿಂದಾಲ್ ರನ್ನು ವಜಾ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News