'ಅಗ್ನಿಪಥ್' ಉದ್ಯೋಗ ಯೋಜನೆಯಲ್ಲ, ಕೌಶಲ್ಯಾಭಿವೃದ್ಧಿ ಯೋಜನೆ ಎಂದ ಬಿಹಾರ ಉಪಮುಖ್ಯಮಂತ್ರಿ

Update: 2022-06-17 11:35 GMT
Photo: PTI

ಪಾಟ್ನಾ: ಬಿಹಾರದಲ್ಲಿ ಅಗ್ನಿಪಥ್ ಯೋಜನೆಯ ವಿರುದ್ಧ ಪ್ರತಿಭಟನೆಗಳ ವೇಳೆ ಪಶ್ಚಿಮ ಚಂಪಾರಣ್ ಜಿಲ್ಲೆಯ ಬೆಟ್ಟಯ ಎಂಬಲ್ಲಿರುವ  ಉಪಮುಖ್ಯಮಂತ್ರಿ ರೇಣು ದೇವಿ ಅವರ ನಿವಾಸ ಕೂಡ ಪ್ರತಿಭಟನಾಕಾರರ ಆಕ್ರೋಶಕ್ಕೆ ತುತ್ತಾಗಿದೆ. ಇದರ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ರೇಣು ದೇವಿ "ಅಗ್ನಿಪಥ್ ಯೋಜನೆಯು ಉದ್ಯೋಗ ಕೊಡುವ ಯೋಜನೆಯೆಂದು ನನಗೆ ಕಾಣುತ್ತಿಲ್ಲ, ಬದಲು ಅದು ಸೇನಾ ಪಡೆಗಳೊಂದಿಗೆ ಕೌಶಲ್ಯಾಭಿವೃದ್ಧಿ ಯೋಜನೆಗಾಗಿದೆ,'' ಎಂದು ಅವರು ಹೇಳಿದ್ದಾರೆ. ಘಟನೆ ಸಂದರ್ಭ ಸಚಿವೆ ತಮ್ಮ ನಿವಾಸದಲ್ಲಿರದೆ ಪಾಟ್ನಾದಲ್ಲಿದ್ದರು.

"ಈ ಮಕ್ಕಳಿಗೆ ಅರ್ಥವಾಗುತ್ತಿಲ್ಲ. ಜನರು 23-24 ವರ್ಷ ವಯಸ್ಸಿನವರಾಗುವಾಗ ಉದ್ಯೋಗ ಅರಸಲು ಆರಂಭಿಸುತ್ತಾರೆ. ಆದರೆ ನಾವು ಹದಿನೇಳುವರೆ ವರ್ಷ ವಯಸ್ಸಿನವರನ್ನೂ ತೆಗೆದುಕೊಳ್ಳುತ್ತಿದ್ದೇವೆ,'' ಎಂದು ಅವರು ಹೇಳಿದರು.

"ಪ್ರತಿಭಟನೆಗಳ ವೇಳೆ ಹಿಂಸಾಚಾರ ಅಸ್ವೀಕಾರಾರ್ಹ ಎಂದು ಆಕಾಂಕ್ಷಿಗಳು ತಿಳಿಯಬೇಕು. ಖಾಸಗಿ ಆಸ್ತಿಪಾಸ್ತಿ ಮಾತ್ರವಲ್ಲ ಅವರು ಸಾರ್ವಜನಿಕ ಆಸ್ತಿಗಳಿಗೂ ಹಾನಿಯುಂಟು ಮಾಡುತ್ತಿದ್ದಾರೆ,'' ಎಂದು ಅವರು ಹೇಳಿದರು.

ಬಿಜೆಪಿಯ ಮಿತ್ರ ಪಕ್ಷ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜೆಡಿಯು ಪಕ್ಷ ಯೋಜನೆಯನ್ನು ಮರುಪರಿಶೀಲಿಸಲು ಕೋರಿರುವ ಕುರಿತು ಪ್ರತಿಕ್ರಿಯಿಸಿದ ಅವರು, "ಜನರು ವಿಭಿನ್ನ ಅಭಿಪ್ರಾಯ ಹೊಂದಿರಬಹುದು. ನಾವು ಈಗಾಗಲೇ ಹೇಳಿದ್ದೇವೆ. ನಾಲ್ಕು ವರ್ಷಗಳ ನಂತರ ಶೇ 75ರಷ್ಟು ಮಂದಿ ಪ್ರಮಾಣಪತ್ರ ಪಡೆಯುತ್ತಾರೆ.  ಅವರು ಅಗ್ನಿವೀರ್ ತರಬೇತಿ ಹೊಂದಿದ್ದಾರೆ ಎಂಬ ಪ್ರಮಾಣಪತ್ರವಿದು. ಹೀಗೆ ಪ್ರಮಾಣಪತ್ರ ಪಡೆದವರಿಗೆ ಭಾರತದಲ್ಲಿ ಉದ್ಯೋಗಗಳ ಕೊರತೆಯಿಲ್ಲ,'' ಎಂದು ಅವರು ಹೇಳಿದರು.

ನಾಲ್ಕು ವರ್ಷಗಳ ನಂತರ ಗ್ರಾಚುವಿಟಿ, ಪಿಂಚಣಿ ದೊರೆಯುವುದಿಲ್ಲ ಎಂಬ ಕುರಿತು ಪ್ರತಿಕ್ರಿಯಿಸಿದ ಸಚಿವೆ, "ದೇಶಕ್ಕೆ ಅಗತ್ಯವಿರುವಷ್ಟು ಉದ್ಯೋಗಗಳನ್ನು ಮಾತ್ರ ನೀಡಬಹುದು. ಎಲ್ಲರಿಗೂ ಸರಕಾರಿ ನೌಕರಿ ದೊರೆಯಲು ಸಾಧ್ಯವಿಲ್ಲ. ಮೇಲಾಗಿ ಇದೊಂದು ಕೌಶಲ್ಯ ತರಬೇತಿ. ಹೀಗಿರುವಾಗ ಪಿಂಚಣಿ ಮತ್ತು ಗ್ರಾಚುವಿಟಿಗೆ ಹೇಗೆ ಬೇಡಿಕೆಯಿಡಬಹುದು? ನಾಲ್ಕು ವರ್ಷದ ತರಬೇತಿಗೆ ಇಷ್ಟೊಂದು ಸವಲತ್ತುಗಳನ್ನು ಯಾವ ದೇಶ ನೀಡುತ್ತದೆ?'' ಎಂದು ಅವರು ಪ್ರಶ್ನಿಸಿದರು.

ಉದ್ಯೋಗ ಪಡೆದವರಿಗೆ ಪ್ರತಿ ತಿಂಗಳು ರೂ 21.000 ದಿಂದ ರೂ 32,000 ವೇತನದ ಹೊರತಾಗಿ ನಾಲ್ಕು ವರ್ಷಗಳ ನಂತರ ರೂ 11 ಲಕ್ಷಕ್ಕೂ ಅಧಿಕ ಹಣ ದೊರೆಯಲಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News