ಗಾಯಕ ಸಿಧು ಮೂಸೇವಾಲ ಹತ್ಯೆ ಆರೋಪಿಗಳನ್ನು ಪತ್ತೆ ಹಚ್ಚಲು ಸಹಾಯ ಮಾಡಿದ ಸಣ್ಣ ಸುಳಿವು
ಚಂಡೀಗಢ: ಅನಾಥವಾಗಿ ನಿಲ್ಲಿಸಿದ್ದ ವಾಹನದಲ್ಲಿದ್ದ ಸಣ್ಣ ಸುಳಿವು ಪಂಜಾಬಿ ಗಾಯಕ ಸಿಧು ಮೂಸೇವಾಲ ಹತ್ಯೆಯನ್ನು ಭೇದಿಸಲು ಸಹಾಯ ಮಾಡಿದೆ, ಈ ಸುಳಿವಿನ ಆಧಾರದ ಮೇಲೆ ಹತ್ಯೆಯ ಪ್ರಮುಖ ಸಂಚುಕೋರ ಲಾರೆನ್ಸ್ ಬಿಷ್ಣೋಯ್ ಸೇರಿದಂತೆ 10 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಅಪರಾಧದಲ್ಲಿ ಭಾಗಿಯಾಗಿರುವ ನಾಲ್ವರು ಶೂಟರ್‌ಗಳನ್ನು ಪೊಲೀಸರು ಗುರುತಿಸಿದ್ದಾರೆ.
ಮೇ 29 ರಂದು ಸಂಜೆ 5 ಗಂಟೆ ಸುಮಾರಿಗೆ ತನ್ನ ಮನೆಯಿಂದ ಹೊರಟಿದ್ದ ಸಿಧು ಮೂಸೇವಾಲ ಅವರನ್ನು ಅಪರಿಚಿತರು ಗುಂಡಿಕ್ಕಿ ಕೊಂದಿದ್ದರು. ಭಗವಂತ್ ಮಾನ್ ಸರ್ಕಾರವು ಹತ್ಯೆಯ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು ರಚಿಸಿತ್ತು.
ಅದರಂತೆ, ತನಿಖೆಗೆ ಇಳಿದಿದ್ದ ಪೊಲೀಸ್ ತಂಡಕ್ಕೆ, ಅಪರಾಧ ನಡೆದ 13 ಕಿಮೀ ದೂರದಲ್ಲಿ ಖಯಾಲಾ ಗ್ರಾಮದ ಬಳಿ ಬೊಲೆರೊ ಕಾರೊಂದು ಪತ್ತೆಯಾಗಿತ್ತು, ಅದರಲ್ಲಿದ್ದ ಇಂಧನ ರಸೀದಿಯನ್ನು (ಮೇ 25, 2022) ವಶಪಡಿಸಿಕೊಂಡಿರುವುದು ತನಿಖೆಗೆ ದೊಡ್ಡ ಮುನ್ನಡೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಶೀದಿಯನ್ನು ನೀಡಿದ ಫತೇಹಾಬಾದ್ ಮೂಲದ ಪೆಟ್ರೋಲ್ ಪಂಪ್‌ಗೆ ತಕ್ಷಣ ಪೊಲೀಸ್ ತಂಡವನ್ನು ಕಳುಹಿಸಿದ್ದು, ಅಲ್ಲಿಂದ ಸಿಸಿಟಿವಿ ದೃಶ್ಯಾವಳಿಗಳನ್ನು ಮರುಪಡೆಯಲಾಗಿತ್ತು.
ದೃಶ್ಯಾವಳಿಗಳಿಂದ, ಸೋನಿಪತ್‌ನ ಪ್ರಿಯಾವರತ್ ಎಂಬ ವ್ಯಕ್ತಿಯನ್ನು ಪೊಲೀಸರು ಗುರುತಿಸಿದ್ದು, ಬಹುಶಃ ಆತ ಶೂಟರ್ ಆಗಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಬೊಲೆರೊದ ಮಾಲೀಕರ ಹೆಸರನ್ನು ಅದರ ಎಂಜಿನ್ ಮತ್ತು ಚಾಸಿಸ್ ಸಂಖ್ಯೆಯಿಂದ ಪತ್ತೆಹಚ್ಚಲಾಗಿದೆ ಎಂದು ಅವರು ಹೇಳಿದ್ದಾರೆ. ನಂತರ ಪೊಲೀಸರು ಅಪರಾಧಕ್ಕೆ ಬಳಸಿದ ಎಲ್ಲಾ ವಾಹನಗಳನ್ನು ಪತ್ತೆಹಚ್ಚಲಾಗಿದೆ. ಅಪರಾಧಕ್ಕೆ- ಮಹೀಂದ್ರ ಬೊಲೆರೊ, ಟೊಯೊಟಾ ಕೊರೊಲ್ಲಾ ಮತ್ತು ಬಿಳಿ ಮಾರುತಿ ಸುಜುಕಿ ಆಲ್ಟೊ ಕಾರುಗಳನ್ನು ಬಳಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಮುಖ ಆರೋಪಿ ಲಾರೆನ್ಸ್ ಬಿಷ್ಣೋಯ್ ಹೊರತುಪಡಿಸಿ, ಪೊಲೀಸರು ಒಂಬತ್ತು ಮಂದಿಯನ್ನು ಬಂಧಿಸಿದ್ದಾರೆ.