ಸಂಘರ್ಷ, ಹಿಂಸಾಚಾರ, ಬಿಕ್ಕಟ್ಟಿನ ಕಾರಣ ವಿಶ್ವದಾದ್ಯಂತ 36 ಮಿಲಿಯನ್ ಮಕ್ಕಳ ಸ್ಥಳಾಂತರ: ಯುನಿಸೆಫ್

Update: 2022-06-17 18:18 GMT

PHOTO CREDIT: UNICEF/Jean-Claude Wenga
 

ನ್ಯೂಯಾರ್ಕ್, ಜೂ.17: ಸಂಘರ್ಷ, ಹಿಂಸಾಚಾರ ಮತ್ತಿತರ ಬಿಕ್ಕಟ್ಟಿನ ಕಾರಣದಿಂದ ವಿಶ್ವದಾದ್ಯಂತ 2021ರ ಅಂತ್ಯದ ವೇಳೆಗೆ 36.5 ಮಿಲಿಯನ್ ಮಕ್ಕಳು ಸ್ಥಳಾಂತರಗೊಂಡಿದ್ದು, ದ್ವಿತೀಯ ವಿಶ್ವಯುದ್ಧದ ಬಳಿಕದ ಅತ್ಯಧಿಕ ಪ್ರಮಾಣ ಇದಾಗಿದೆ ಎಂದು ವಿಶ್ವಸಂಸ್ಥೆಯ ಮಕ್ಕಳ ನಿಧಿ(ಯುನಿಸೆಫ್) ಶುಕ್ರವಾರ ವರದಿ ಮಾಡಿದೆ.

ಸ್ಥಳಾಂತರಗೊಂಡ ಮಕ್ಕಳ ಸಂಖ್ಯೆ 2021ರಲ್ಲಿ 2.2 ಮಿಲಿಯನ್ ಹೆಚ್ಚಿದ್ದು, ಒಟ್ಟು 36.5 ಸ್ಥಳಾಂತರಿತರಲ್ಲಿ 13.7 ಮಿಲಿಯನ್ ನಿರಾಶ್ರಿತ ಮತ್ತು ಆಶ್ರಯ-ಅನ್ವೇಷಕ ಮಕ್ಕಳಿದ್ದರೆ, 22.8 ಮಿಲಿಯನ್ನಷ್ಟು ಮಕ್ಕಳು ಸಂಘರ್ಷ ಮತ್ತು ಹಿಂಸಾಚಾರದಿಂದ ಆಂತರಿಕವಾಗಿ ಸ್ಥಳಾಂತರಗೊಂಡವರು ಎಂದು ಯುನಿಸೆಫ್ನ ವರದಿ ಹೇಳಿದೆ. ಪರಿಸರ ಮತ್ತು ಹವಾಮಾನ ಬದಲಾವಣೆಯ ಆಘಾತ ಮತ್ತು ವಿಪತ್ತಿನ ಸಮಸ್ಯೆಯಿಂದಾಗಿ ಸ್ಥಳಾಂತರಗೊಂಡವರು ಹಾಗೂ 2022ರಲ್ಲಿ ರಶ್ಯ-ಉಕ್ರೇನ್ ಯುದ್ಧದಿಂದ ನೆಲೆ ಕಳೆದುಕೊಂಡ ಮಕ್ಕಳ ಸಂಖ್ಯೆ ಈ ವರದಿಯಲ್ಲಿ ಸೇರಿಲ್ಲ ಎಂದು ಯುನಿಸೆಫ್ ಹೇಳಿದೆ.

ಅಫ್ಘಾನ್ನಂತಹ ತೀವ್ರ ಮತ್ತು ದೀರ್ಘಕಾಲದ ಸಂಷರ್ಘಗಳನ್ನು ಒಳಗೊಂಡ ಬಿಕ್ಕಟ್ಟು , ಹವಾಮಾನ ಬದಲಾವಣೆಯ ವಿನಾಶಕಾರಿ ಪರಿಣಾಮಗಳಿಂದ ಉಲ್ಬಣಗೊಂಡಿರುವ ಯೆಮನ್ ಅಥವಾ ಕಾಂಗೊ ಗಣರಾಜ್ಯದ ರೀತಿಯಲ್ಲಿನ ನಾಜೂಕಿನ ಪರಿಸ್ಥಿತಿ ಈ ದಾಖಲೆ ಮಟ್ಟದ ಸ್ಥಳಾಂತರಕ್ಕೆ ನೇರ ಕಾರಣವಾಗಿದೆ. ನಿರಾಶ್ರಿತ ಮಕ್ಕಳಲ್ಲಿ 50%ದಷ್ಟು ಮಕ್ಕಳು ಮಾತ್ರ ಪ್ರಾಥಮಿಕ ಶಾಲೆಯಲ್ಲಿ ದಾಖಲಾತಿ ಪಡೆದಿದ್ದರೆ, 25%ಕ್ಕಿಂತ ಕಡಿಮೆ ಪ್ರಮಾಣದ ಮಕ್ಕಳು ಮಾಧ್ಯಮಿಕ ಶಾಲೆಗೆ ಸೇರ್ಪಡೆಗೊಂಡಿದ್ದಾರೆ. ದಾಖಲೆ ಪ್ರಮಾಣದ ವಲಸಿಗ ಮತ್ತು ಸ್ಥಳಾಂತರಿತ ಮಕ್ಕಳಿಗೆ ಆರೋಗ್ಯ ರಕ್ಷಣೆ, ಶಿಕ್ಷಣ ಮತ್ತು ಭದ್ರತೆಯ ಅಗತ್ಯವಿದೆ ಎಂದು ವರದಿ ಹೇಳಿದೆ.

 ಇದೊಂದು ಎಚ್ಚರಿಕೆಯ ಕರೆಗಂಟೆಯಾಗಿದ್ದು ಮಕ್ಕಳು ಸ್ಥಳಾಂತರಗೊಳ್ಳುವುದನ್ನು ತಡೆಯಲು ಮತ್ತು ಸ್ಥಳಾಂತರಗೊಂಡ ಮಕ್ಕಳಿಗೆ ಶಿಕ್ಷಣ, ಭದ್ರತೆ ಹಾಗೂ ಇತರ ಪ್ರಮುಖ ಸೇವೆಗಳ ಲಭ್ಯತೆಯನ್ನು ಖಾತರಿಪಡಿಸಲು ಸರಕಾರಗಳು ಕ್ರಮ ಕೈಗೊಳ್ಳುವುದೆಂದು ಆಶಿಸುವುದಾಗಿ ಯುನಿಸೆಫ್ ಕಾರ್ಯನಿರ್ವಾಹಕ ನಿರ್ದೇಶಕಿ ಕ್ಯಾಥರಿನ್ ರಸೆಲ್ ಹೇಳಿದ್ದಾರೆ.

ಏಕಾಂಗಿ ಅಥವಾ ಪ್ರತ್ಯೇಕಗೊಂಡ ಮಕ್ಕಳು ಕಳ್ಳಸಾಗಣೆ, ಶೋಷಣೆ, ದೌರ್ಜನ್ಯ ಮತ್ತು ಹಿಂಸೆಯ ಅಧಿಕ ಅಪಾಯವನ್ನು ಎದುರಿಸುತ್ತಿದ್ದಾರೆ. ಜಾಗತಿಕವಾಗಿ ಮಾನವ ಕಳ್ಳಸಾಗಣೆ ಪ್ರಕರಣದ ಬಲಿಪಶುಗಳಲ್ಲಿ ಸುಮಾರು 28%ನಷ್ಟು ಮಕ್ಕಳಿದ್ದಾರೆ ಎಂದು ಯುನಿಸೆಫ್ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News