ರಕ್ಷಣಾ, ಗೃಹ ಸಚಿವಾಲಯ ಹುದ್ದೆಗಳಲ್ಲಿ ಅಗ್ನಿವೀರರಿಗೆ ಶೇ. 10 ಮೀಸಲಾತಿ ಘೋಷಿಸಿದ ಕೇಂದ್ರ

Update: 2022-06-18 11:39 GMT

ಹೊಸದಿಲ್ಲಿ: ಸೇನಾಪಡೆಗಳಿಗೆ ಯುವಜನರ ಸೇರ್ಪಡೆಗಾಗಿ ಕೇಂದ್ರ ಸರಕಾರ ಘೋಷಿಸಿದ ಅಗ್ನಿಪಥ್ ಯೋಜನೆಯನ್ನು ವಿರೋಧಿಸಿ ದೇಶದ ಹಲವು ರಾಜ್ಯಗಳಲ್ಲಿ ನಡೆಯುತ್ತಿರುವ ಪ್ರತಿಭಟನೆಗಳನ್ನು ತಣ್ಣಗಾಗಿಸುವ ನಿಟ್ಟಿನಲ್ಲಿ ಇಂದು ಕೇಂದ್ರ ಸರಕಾರ ಘೋಷಣೆಯೊಂದನ್ನು ಮಾಡಿದ್ದು ಅಗ್ನಿಪಥದಡಿ ಸೇನೆಗೆ ಸೇರ್ಪಡೆಗೊಂಡವರಿಗೆ ಅವರ ಅವಧಿ ಮುಗಿದ ನಂತರ ಕೇಂದ್ರ ಗೃಹ ಮತ್ತು ರಕ್ಷಣಾ ಸಚಿವಾಲಯಗಳಲ್ಲಿನ ಹುದ್ದೆಗಳಲ್ಲಿ ಶೇ 10 ಮೀಸಲಾತಿ ನೀಡುವುದಾಗಿ ತಿಳಿಸಿದೆ. ಮೀಸಲಾತಿಯನ್ನು ಭಾರತೀಯ ಕೋಸ್ಟ್ ಗಾರ್ಡ್ ಮತ್ತು ರಕ್ಷಣಾ ಸಿವಿಲಿಯನ್ ಹುದ್ದೆಗಳು  ಮತ್ತು ಎಲ್ಲಾ 16 ರಕ್ಷಣಾ ಸಾರ್ವಜನಿಕ ರಂಗದ ಸಂಸ್ಥೆಗಳಲ್ಲಿ ಜಾರಿಗೆ ಬರಲಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ಈಗ ಮಾಜಿ ಸೈನಿಕರಿಗೆ ಇರುವ ಮೀಸಲಾತಿಗೆ ಮಿಗಿಲಾಗಿ ಈ ಮೀಸಲಾತಿ ಒದಗಿಸಲಾಗುವುದು ಇದಕ್ಕಾಗಿ ನೇಮಕಾತಿ ನಿಯಮಗಳಲ್ಲಿ ಸೂಕ್ತ ತಿದ್ದುಪಡಿ ತರಲಾಗುವುದು ಎಂದು ಅವರು ಹೇಳಿದ್ದಾರೆ.

ಇದಕ್ಕೂ ಮುನ್ನ ಸಿಎಪಿಎಫ್ ಮತ್ತು ಅಸ್ಸಾಂ ರೈಫಲ್ಸ್ ನಲ್ಲಿ ಕೂಡ ಅಗ್ನಿವೀರರಿಗೆ ಮೀಸಲಾತಿ ಒದಗಿಸಲಾಗುವುದು ಎಂದು ಸರಕಾರ ತಿಳಿಸಿತ್ತು.

ಕೇಂದ್ರ ಸಶಸ್ತ್ರ ಪೊಲೀಸ್ ಪಡೆ ಮತ್ತು ಅಸ್ಸಾಂ ರೈಫಲ್ಸ್ ಸೇರಲು ಬಯಸುವ ಸೇವಾವಧಿ ಮುಗಿದ ಅಗ್ನವೀರರಿಗೆ ವಯೋಮಿತಿಯಲ್ಲಿ ಮೂರು ವರ್ಷ ಸಡಿಲಿಕೆ ನೀಡಲಾಗುವುದೆಂದೂ ಸರಕಾರ ಹೇಳಿದೆ. ಮೊದಲನೇ ಬ್ಯಾಚಿನವರಿಗೆ ವಯೋಮಿತಿಯನ್ನು ಐದು ವರ್ಷ ಸಡಿಲಿಸಲಾಗುವುದು ಎಂದು ಕೂಡ ತಿಳಿಸಲಾಗಿದೆ. ಸದ್ಯ ಈ ಎರಡೂ ಪಡೆಗಳಿಗೆ ಸೇರಲು ವಯೋಮಿತಿ 25 ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News