×
Ad

ಭೀಕರ ಪ್ರವಾಹಕ್ಕೆ ಬಾಂಗ್ಲಾ ತತ್ತರ: 25 ಮಂದಿ ಮೃತ್ಯು; 4 ಮಿಲಿಯನ್ ಮಂದಿ ಸಂಕಷ್ಟದಲ್ಲಿ

Update: 2022-06-18 21:54 IST
PHOTO: AFP

ಡಾಕ, ಜೂ.18: ಬಾಂಗ್ಲಾದೇಶದಲ್ಲಿ ಮುಂಗಾರು ಮಳೆಯ ಅಬ್ಬರದಿಂದ ಉಂಟಾಗಿರುವ ವಿನಾಶಕಾರಿ ಪ್ರವಾಹದಿಂದ ಕನಿಷ್ಟ 25 ಮಂದಿ ಮೃತಪಟ್ಟಿದ್ದು 4 ಮಿಲಿಯನ್ಗೂ ಅಧಿಕ ಜನತೆ ಸಂಕಷ್ಟದಲ್ಲಿ ಸಿಲುಕಿದ್ದಾರೆ ಎಂದು ಅಧಿಕಾರಿಗಳು ಶನಿವಾರ ಹೇಳಿದ್ದಾರೆ.

ನಂದಾಲಿ ಗ್ರಾಮದಲ್ಲಿ ಸಿಡಿಲಿನ ಹೊಡೆತದಿಂದ ಮೂವರು ಮಕ್ಕಳ ಸಹಿತ 21 ಮಂದಿ ಮತ್ತು ಚಿತ್ತಗಾಂಗ್ನಲ್ಲಿ ಭೂಕುಸಿತಕ್ಕೆ ಸಿಲುಕಿ 4 ಮಂದಿ ಮೃತಪಟ್ಟಿರುವ ಮಾಹಿತಿ ಲಭಿಸಿದೆ. ಹಲವೆಡೆ ಭೂಕುಸಿತ ಸಂಭವಿಸಿದ್ದು ಮೃತರ ಸಂಖ್ಯೆ ಹೆಚ್ಚುವ ಸಾಧ್ಯತೆಯಿದೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿ ಮಿಝನೌರ್ ರಹ್ಮಾನ್ ಹೇಳಿದ್ದಾರೆ. ಶುಕ್ರವಾರ ಸಂಜೆ ವೇಳೆಗೆ ಮಳೆಯ ಅಬ್ಬರ ತುಸು ಕಡಿಮೆಯಾದ್ದರಿಂದ ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆ ಚುರುಕುಗೊಂಡಿತ್ತು. ಆದರೆ ಶನಿವಾರ ಬೆಳಗ್ಗಿನಿಂದ ಮಳೆ ಮತ್ತೆ ಬಿರುಸುಗೊಂಡಿದ್ದು ಪರಿಸ್ಥಿತಿ ಅತ್ಯಂತ ಕೆಟ್ಟದಾಗಿದೆ. 4 ಮಿಲಿಯನ್ಗೂ ಅಧಿಕ ಮಂದಿ ಅಪಾಯಕ್ಕೆ ಸಿಲುಕಿದ್ದಾರೆ. ಹಲವು ಗ್ರಾಮಗಳಲ್ಲಿ ವಿದ್ಯುತ್ ಪೂರೈಕೆ ಅಸ್ತವ್ಯಸ್ತಗೊಂಡಿದೆ ಎಂದು ಸಿಲ್ಹೆಟ್ ಪ್ರಾಂತದ ಮುಖ್ಯ ಅಧಿಕಾರಿ ಮೊಶ್ರಫ್ ಹುಸೈನ್ರನ್ನು ಉಲ್ಲೇಖಿಸಿ ಎಎಫ್ಪಿ ಸುದ್ಧಿಸಂಸ್ಥೆ ವರದಿ ಮಾಡಿದೆ.

ಕಳೆದ ವಾರದಿಂದ ನಿರಂತರ ಸುರಿಯುತ್ತಿರುವ ಮುಂಗಾರು ಮಳೆ ದೇಶದ ಈಶಾನ್ಯದ ವಿಶಾಲ ಪ್ರದೇಶವನ್ನು ಮುಳುಗಿಸಿದೆ. ನೆರೆಯಲ್ಲಿ ಸಿಲುಕಿ ಅತಂತ್ರ ಸ್ಥಿತಿಯಲ್ಲಿರುವವರನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಸೇನೆಯನ್ನು ನಿಯೋಜಿಸಲಾಗಿದೆ. ಕಂಪನಿಗಂಜ್ ಗ್ರಾಮದಲ್ಲಿ ನದಿಯಲ್ಲಿ ಧಿಡೀರನೆ ಉಕ್ಕೇರಿ ಹರಿದ ಪ್ರವಾಹದಿಂದ ನದಿದಂಡೆ ಒಡೆದು ಗ್ರಾಮವಿಡೀ ನೀರಿನಲ್ಲಿ ಮುಳುಗಿದೆ. ಗ್ರಾಮದ ನಿವಾಸಿಗಳನ್ನು ರಕ್ಷಿಸಿ ಶಾಲೆಗಳಲ್ಲಿ ತೆರದಿರುವ ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ.

ನದಿಯಲ್ಲಿ ಏಕಾಏಕಿ ಪ್ರವಾಹ ಬಂದು ಗ್ರಾಮವನ್ನು ಮುಳುಗಿಸಿದೆ. ಕಳೆದ 2 ದಿನದಿಂದ ಮನೆಯ ಮಾಡಿನ ಮೇಲೆ ಕುಳಿತು ಸಹಾಯಕ್ಕಾಗಿ ಎದುರುನೋಡುತ್ತಿದ್ದೆವು. ಮನೆಯಲ್ಲಿ ಆಹಾರ ಪದಾರ್ಥಗಳಿದ್ದರೂ ನೀರಿನಲ್ಲಿ ಮುಳುಗಿದ ಕಾರಣ 2 ದಿನದಿಂದ ಉಪವಾಸವಿದ್ದೇವೆ ಎಂದು ಸ್ಥಳಾಂತರಗೊಂಡ ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.

ಬಾಂಗ್ಲಾದೇಶದಲ್ಲಿ ತಗ್ಗುಪ್ರದೇಶದಲ್ಲಿ ವಾಸಿಸುವ ಜನರಿಗೆ ಪ್ರವಾಹದ ಸಮಸ್ಯೆ ಹೊಸದೇನಲ್ಲ. ಆದರೆ ಇತ್ತೀಚಿನ ವರ್ಷಗಳಲ್ಲಿ ಹವಾಮಾನ ವೈಪರೀತ್ಯದಿಂದ ಪ್ರವಾಹದ ಆವರ್ತನ, ಉಗ್ರತೆ ಮತ್ತು ಅನಿರೀಕ್ಷಿತತೆ ಹೆಚ್ಚಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News