×
Ad

ಬಿಪಿಸಿಎಲ್ ಗ್ಯಾಸ್ ಲಾರಿ ಚಾಲಕರಿಗೆ ಕಿ.ಮೀ. ದರ 5 ರೂ. ನೀಡಲು ಒತ್ತಾಯ

Update: 2022-06-18 22:43 IST

ಮಂಗಳೂರು, ಜೂ.೧೮: ಬೈಕಂಪಾಡಿಯಲ್ಲಿರುವ ಬಿಪಿಸಿಎಲ್ (ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್) ಘಟಕದಿಂದ ಗ್ಯಾಸ್ ಸಾಗಾಟದ ಲಾರಿ ಚಾಲಕರಿಗೆ ನೀಡಲಾಗುವ ಕಿ.ಮೀ. ದರವನ್ನು ೫ ರೂ.ಗಳಿಗೆ ಏರಿಕೆ ಮಾಡಬೇಕು ಎಂದು ಭಾರತ್ ಗ್ಯಾಸ್ ಲಾರಿ ಚಾಲಕರ ಸಂಘ ಒತ್ತಾಯಿಸಿದೆ.

ಸುದ್ದಿಗೋಷ್ಠಿಯಲ್ಲಿಂದು ಈ ಒತ್ತಾಯ ಮಾಡಿದ  ಮೋಟಾರು ಟ್ರಾನ್ಸ್‌ಪೋರ್ಟ್ ಆ್ಯಂಡ್ ಇಂಜಿನಿಯರಿಂಗ್ ವರ್ಕರ್ಸ್ ಯೂನಿಯನ್‌ನ ಪ್ರಧಾನ ಕಾರ್ಯದರ್ಶಿ ವಸಂತ ಆಚಾರಿ, ಈ ಬಗ್ಗೆ ಈಗಾಗಲೇ ಲಾರಿಗಳ ಮಾಲಕರ ವರ್ಗ, ಗುತ್ತಿಗೆದಾರರು ಹಾಗೂ ಭಾರತ್ ಗ್ಯಾಸ್‌ನ ಆಡಳಿತ ವರ್ಗಕ್ಕೆ ಲಿಖಿತವಾಗಿ ಆಗ್ರಹಿಸಲಾಗಿದೆ. ಮಾತುಕತೆಯ ಪ್ರಕಾರ ೫ ರೂ. ನೀಡಲು ಒಪ್ಪಿಗೆ ನೀಡಿದ್ದರೂ ಇನ್ನೂ ಜಾರಿಗೊಳಿಸಿಲ್ಲ. ೨೧ರೊಳಗೆ ದರ ಏರಿಕೆಯನ್ನು ಜಾರಿಗೊಳಿಸಬೇಕು . ಇಲ್ಲವಾದಲ್ಲಿ ೨೧ರಿಂದ ಲಾರಿಗಳ ಸಾಗಾಟ ಸ್ಥಗಿತಗೊಳಿಸಲಾಗುವುದು. ಅಡುಗೆ ಅನಿಲ ಅಗತ್ಯ ಸೇವೆಗಳಲ್ಲಿ ಬರುವುದರಿಂದ ಲಾರಿ ಸ್ಥಗಿತದಿಂದ ಸಾರ್ವಜನಿಕರಿಗೆ ಆಗುವ ತೊಂದರೆಗಳಿಗೆ ಸಂಸ್ಥೆ ಹಾಗೂ ಜಿಲ್ಲಾಡಳಿತವೇ ಹೊಣೆಯಾಗಲಿದೆ ಎಂದರು.

ಭಾರತ್ ಗ್ಯಾಸ್ ಲಾರಿ ಚಾಲಕರು ಸಿಐಟಿಯು ಸಂಘಟನೆಯ ಮೋಟಾರು ಟ್ರಾನ್ಸ್‌ಪೋರ್ಟ್ ಆ್ಯಂಡ್ ಇಂಜಿನಿಯರಿಂಗ್ ವರ್ಕರ್ಸ್ ಯೂನಿಯನ್‌ಗೆ ಸಂಯೋಜನೆಗೊಂಡಿದ್ದಾರೆ ಎಂದು ಅವರು ಹೇಳಿದರು.

ಕೇರಳದಲ್ಲಿ ಭಾರತ್ ಗ್ಯಾಸ್ ಲಾರಿ ಚಾಲಕರಿಗೆ ಕಿ.ಮೀ. ೬ ರೂ.ನಂತೆ ದರವನ್ನು ನೀಡಲಾಗುತ್ತಿದೆ. ಇಲ್ಲಿನ ಲಾರಿ ಚಾಲಕರಿಗೆ ನೀಡಲಾಗುತ್ತಿರುವ ದರ ಕಿ.ಮೀ. ೪ ರೂ. ಮಂಗಳೂರು ಘಟಕದಿಂದ ಕೇರಳಕ್ಕೆ ಸಾಗುವ ಕೇರಳ ಮೂಲದ ವಾಹನದ ಚಾಲಕರಿಗೂ ೬ ರೂ. ದರ ಲಭ್ಯವಾಗುತ್ತದೆ. ಇದು ಒಂದು ರೀತಿಯ ತಾರತಮ್ಯ ಧೋರಣೆಯಾಗಿದೆ. ಇದನ್ನು ಸರಿಪಡಿಸಬೇಕು. ಜತೆಗೆ ಘಟಕದಲ್ಲಿ ಲಾರಿಗಲಿಗೆ ಗ್ಯಾಸ್ ಲೋಡ್ ಆದ  ಅರ್ಧ ಗಂಟೆಯೊಳಗೆ ಬಿಲ್ ನೀಡಬೇಕು. ಪ್ರಸಕ್ತ ಬೆಳಗ್ಗೆ ವಾಹನ ಲೋಡ್ ಮಾಡಲಾದರೂ ರಾತ್ರಿ ಹೊತ್ತು ಬಿಲ್ ನೀಡುವುದು. ಈ ಲಾರಿ ಚಾಲಕರು  ಅಪಾಯಕಾರಿ ಸ್ಥಿತಿಯಲ್ಲಿ ರಾತ್ರಿ ಹೊತ್ತು ಸಂಚಾರ ಮಾಡುವ ಪರಿಸ್ಥಿತಿ ಇದೆ. ಇದಕ್ಕೆ ಅವಕಾಶ ನೀಡಬಾರದು. ಮಾತ್ರವಲ್ಲದೆ, ಬೈಕಂಪಾಡಿ ಘಟಕದಲ್ಲಿರುವ ಇತರ ಮೂಲಭೂತ ಸೌಕರ್ಯಗಳ ಕೊರತೆಯನ್ನೂ ಬಗೆಹರಿಸಬೇಕು ಎಂದು ಸಮಾಲೋಚಕ ಮುನೀರ್ ಕಾಟಿಪಳ್ಳ ಆಗ್ರಹಿಸಿದರು.
ಗೋಷ್ಠಿಯಲ್ಲಿ ಭಾರತ್ ಗ್ಯಾಸ್ ಲಾರಿ ಸಂಘದ ಅದ್ಯಕ್ಷ ದಯಾನಂದ ಸಾಲಿಯಾನ್, ಪ್ರಧಾನ ಕಾರ್ಯದರ್ಶಿ ಅಬ್ದುಲ್ ನಾಸಿರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News